ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾನೆಟ್‌ ಸುದ್ದಿವಾಹಿನಿಯಲ್ಲಿ ಶೋಧ: ಕೇರಳ ವಿಧಾನಸಭೆಯಲ್ಲಿ ಆರೋಪ–ಪ್ರತ್ಯಾರೋಪ

‘ಏಷ್ಯಾನೆಟ್‌ ನ್ಯೂಸ್‌’ ಕಚೇರಿಯಲ್ಲಿ ಶೋಧ
Last Updated 6 ಮಾರ್ಚ್ 2023, 10:55 IST
ಅಕ್ಷರ ಗಾತ್ರ

ತಿರುವನಂತಪುರ: ‘ಏಷ್ಯಾನೆಟ್‌ ನ್ಯೂಸ್‌’ ಸುದ್ದಿವಾಹಿನಿಯ ಕೋಯಿಕ್ಕೋಡ್‌ ಕಚೇರಿಯಲ್ಲಿ ಪೊಲೀಸರು ಶೋಧ ನಡೆಸಿರುವ ವಿಚಾರವಾಗಿ ಆಡಳಿತಾರೂಢ ಎಡರಂಗ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರ ನಡುವಿನ ಆರೋಪ–ಪ್ರತ್ಯಾರೋಪಗಳಿಗೆ ಕೇರಳ ವಿಧಾನಸಭೆ ಸೋಮವಾರ ಸಾಕ್ಷಿಯಾಯಿತು.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಏಷ್ಯಾನೆಟ್‌ ವಾಹಿನಿಯ ಕೊಚ್ಚಿಯಲ್ಲಿರುವ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿರುವುದು ಮತ್ತು ವಾಹಿನಿ ಕಚೇರಿಯಲ್ಲಿ ನಡೆದ ಶೋಧ ಕಾರ್ಯದ ಕುರಿತು ಚರ್ಚೆ ನಡೆಸಬೇಕೆಂದು ಕೋರಿ ವಿರೋಧ ಪಕ್ಷವು ನಿಳುವಳಿ ಗೊತ್ತುವಳಿ ಮಂಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.

‘ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ, ಈ ವಿಚಾರವಾಗಿ ಚರ್ಚೆಗೆ ನಿಳುವಳಿ ಗೊತ್ತುವಳಿ ಮಂಡಿಸುವ ಅಗತ್ಯ ಇಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರತಿಪಾದಿಸಿದರು.

ಗೊತ್ತುವಳಿ ಮಂಡನೆಗೆ ಸ್ಪೀಕರ್‌ ಎ.ಎನ್‌. ಶಂಸೀರ್‌ ಅವರು ಅನುಮತಿ ನಿರಾಕರಿಸಿದಾಗ, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

‘ಪತ್ರಿಕಾ ಸ್ವಾಂತಂತ್ರ್ಯಕ್ಕಾಗಿ ಎಲ್‌ಡಿಎಫ್‌ ಸದಾ ಹೋರಾಟ ನಡೆಸಿದೆ ಮತ್ತು ಅದನ್ನು ಮುಂದುವರಿಸಲಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಾಧ್ಯಮ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿವೆ’ ಎಂದು ಪಿಣರಾಯಿ ವಿಜಯನ್‌ ಆರೋಪಿಸಿದರು.

‘ವಾಹಿನಿಯು ಬಾಲಕಿಯೊಬ್ಬಳನ್ನು ಸಂದರ್ಶನ ನಡೆಸಿ, ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ಈ ಕುರಿತು ಚರ್ಚೆ ನಡೆಸುವ ಅಗತ್ಯ ಇಲ್ಲ’ ಎಂದೂ ಹೇಳಿದರು.

‘ವಾಹಿನಿಯ ವಿರುದ್ಧ ಸರ್ಕಾರವು ತೆಗೆದುಕೊಂಡಿರುವ ಕ್ರಮವು ಅಸಹಿಷ್ಣುತೆಯ ನಡವಳಿಕೆ’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಮತ್ತು ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತ್ತಲ ಆರೋಪಿಸಿದ್ದಾರೆ.

ವಾಹಿನಿಯ ವಿರುದ್ಧ ಎಲ್‌ಡಿಎಫ್‌ನ ಶಾಸಕ ಪಿ.ವಿ. ಅನ್ವರ್‌ ಅವರು ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT