ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಡಳಿತದ ವಿರುದ್ಧ ಒಂದೇ ಧ್ವನಿಯಲ್ಲಿ ಹೋರಾಟ: 18 ವಿರೋಧ ಪಕ್ಷಗಳ ನಿರ್ಧಾರ

Last Updated 28 ಮಾರ್ಚ್ 2023, 3:23 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ರಾತ್ರಿ ಸಭೆ ನಡೆಸಿದ 18 ವಿರೋಧ ಪಕ್ಷಗಳ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲು ಅವರು ನಿರ್ಧರಿಸಿದರು.

ಡಿಎಂಕೆ, ಎನ್‌ಸಿಪಿ, ಜೆಡಿಯು, ಬಿಆರ್‌ಎಸ್, ಎಂಡಿಎಂಕೆ, ಕೆಸಿ, ಟಿಎಂಸಿ, ಆರ್‌ಎಸ್‌ಪಿ, ಆರ್‌ಜೆಡಿ, ಎನ್‌ಸಿ, ಐಯುಎಂಎಲ್, ವಿಸಿಕೆ ಎಸ್‌ಪಿ ಹಾಗೂ ಜೆಎಂಎಂ ಪಕ್ಷಗಳ ನಾಯಕರು ‌‌ಸಭೆಯಲ್ಲಿ ಹಾಜರಿದ್ದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಸಭೆಯಲ್ಲಿ ಇದ್ದರು.

ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯಿಂದ(ಜೆಪಿಸಿ) ತನಿಖೆ ಮತ್ತು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸಲು ನಾಯಕರು ನಿರ್ಧರಿಸಿದರು.

ವೀರ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಭಟನಾರ್ಥವಾಗಿ ಶಿವಸೇನಾ ಸಭೆಯಿಂದ ದೂರ ಉಳಿದಿತ್ತು.

‘ಒಬ್ಬ ವ್ಯಕ್ತಿಯನ್ನು ಉಳಿಸುವ ಉದ್ದೇಶದಿಂದ ಮೋದಿ, 140 ಕೋಟಿ ಜನರ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ. ಮೋದಿಯ ಪರಮ ಆಪ್ತನನ್ನು ರಕ್ಷಿಸಲು ಬಿಜೆಪಿ, ಸಂಸತ್ತಿನಲ್ಲಿ ಜನರ ವಿಷಯಗಳ ಕುರಿತ ಚರ್ಚೆಗೆ ತಡೆಹಾಕಿದೆ. ತಪ್ಪೇನೂ ನಡೆದಿಲ್ಲವೆಂದಾದರೆ ಜಂಟಿ ಸದನ ಸಮಿತಿ ರಚನೆಗೆ ಏಕೆ ಹಿಂದೇಟು?’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

‘ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ್ದ 18 ವಿರೋಧ ಪಕ್ಷಗಳ ನಾಯಕರು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಮತ್ತು ಎಲ್ಲಾ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮೋದಿ ಆಡಳಿತದ ವಿರುದ್ಧ ತಮ್ಮ ಅಭಿಯಾನವನ್ನು ಒಂದೇ ಧ್ವನಿಯಲ್ಲಿ ಮುಂದುವರಿಸಲು ನಿರ್ಧರಿಸಿದರು’ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿದರು.

‘ಮೋದಿಯವರ ಬೆದರಿಕೆ ರಾಜಕೀಯವನ್ನು ಎದುರಿಸಲು ಅವರು ತಮ್ಮ ಸಾಮೂಹಿಕ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ಸಂಕಲ್ಪವು ಈಗ ಸಂಸತ್ತಿನ ಒಳಗೂ ಹೊರಗೂ ಪ್ರತಿಫಲಿಸುತ್ತದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT