ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಸೇನಾ ಪಾಳೇಗಾರಿಕೆ ಮನಃಸ್ಥಿತಿಯ ವ್ಯಕ್ತಿ: ಅರವಿಂದ ಕೇಜ್ರಿವಾಲ್‌

Last Updated 17 ಜನವರಿ 2023, 18:51 IST
ಅಕ್ಷರ ಗಾತ್ರ

ನವದೆಹಲಿ: ‘ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಪಾಳೇಗಾರಿಕೆ ಮನಃಸ್ಥಿತಿಯಿಂದ ಬಳಲುತ್ತಿದ್ದಾರೆ. ನಗರದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಬಯಕೆ ಅವರಿಗಿಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಸಕ್ಸೇನಾ ಅವರು ದೆಹಲಿ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದನ್ನು ಉಲ್ಲೇಖಿಸಿ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿ, ‘ಶಿಕ್ಷಕರೂ ನನ್ನ ಹೋಂವರ್ಕ್‌ ಪರೀಕ್ಷಿಸದೆ ಇರುವಷ್ಟು ಬಾರಿ ಲೆಫ್ಟಿನೆಂಟ್‌ ಗವರ್ನರ್‌ ಅವರು ನನ್ನ ಕಡತಗಳನ್ನು ಪರಿಶೀಲಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಲೆಫ್ಟಿನೆಂಟ್‌ ಗವರ್ನರ್‌ ನನ್ನ ಮುಖ್ಯೋಪಾಧ್ಯಾಯರಲ್ಲ. ದೆಹಲಿಯ ಜನ ನನ್ನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ತನ್ನಿಂದಾಗಿಯೇ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿರುವುದಾಗಿ ಸಕ್ಸೇನಾ ಸಭೆಯೊಂದರ ವೇಳೆ ನನ್ನ ಬಳಿ ಹೇಳಿಕೊಂಡಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ದೆಹಲಿಯ ಏಳು ಸ್ಥಾನಗಳನ್ನೂ ಜಯಿಸಲಿದೆ ಎಂದೂ ತಿಳಿಸಿದ್ದರು. ಅವರು ಪಾಳೇಗಾರಿಕೆ ಮನಃಸ್ಥಿತಿಯಿಂದ ಬಳಲುತ್ತಿರುವುದಕ್ಕೆ ಇದುವೇ ನಿದರ್ಶನ’ ಎಂದಿದ್ದಾರೆ.

‘ಲೆಫ್ಟಿನೆಂಟ್‌ ಗವರ್ನರ್‌ ಯಾರು? ಎಲ್ಲಿಂದ ಬಂದಿದ್ದಾರೆ? ಅವರು ನಮ್ಮ ತಲೆ ಮೇಲೆ ಏಕೆ ಕುಳಿತುಬಿಟ್ಟಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ನಮ್ಮ ಮಕ್ಕಳನ್ನು ಎಲ್ಲಿಗೆ ಕಳುಹಿಸಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆಯೇ? ಇಂತಹ ಪಾಳೇಗಾರಿಕೆ ಮನಃಸ್ಥಿತಿಯ ವ್ಯಕ್ತಿಗಳಿಂದಾಗಿಯೇ ನಮ್ಮ ದೇಶವು ಹಿಂದುಳಿದಿದೆ’ ಎಂದು ಕಿಡಿಕಾರಿದ್ದಾರೆ.

‘ನಾಳೆ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಬಹುದು. ಆಗ ನಮ್ಮ ಸರ್ಕಾರವು ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ಜನರಿಗೆ ಕಿರುಕುಳ ನೀಡುವುದಿಲ್ಲ’ ಎಂದಿದ್ದಾರೆ.

‘ಸಕ್ಸೇನಾ ಅವರು ಏಕಾಂಗಿಯಾ ಗಿಯೇ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಆ ಅಧಿಕಾರ ಅವರಿಗಿಲ್ಲ. ಪೊಲೀಸರನ್ನು ನಿಯಂತ್ರಿಸುವುದು, ಜಮೀನು ಹಾಗೂ ಸಾರ್ವಜನಿಕ ಆದೇಶದಂತಹ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಅವರಿಗಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ’ ಎಂದೂ ಹೇಳಿದ್ದಾರೆ.

ವಿದೇಶಗಳಲ್ಲಿ ಓದುತ್ತಿರುವ ಬಿಜೆಪಿಯವರ ಮಕ್ಕಳ ಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದ ಅವರು ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದಿದ್ದಾರೆ.

ಎಎಪಿ ಪ್ರತಿಭಟನೆ: ‘ಸುಪ್ರೀಂ’ ಎದುರು ಕೇಂದ್ರ ಆಕ್ಷೇಪ
ನವದೆಹಲಿ:
ಲೆಫ್ಟಿನೆಂಟ್‌ ಗವರ್ನರ್‌ ಅವರು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಕೇಜ್ರಿವಾಲ್‌ ನೇತೃತ್ವದಲ್ಲಿ ಎಎಪಿ ಶಾಸಕರು ಸೋಮವಾರ ನಡೆಸಿದ್ದ ಪ್ರತಿಭಟನೆಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ ಎದುರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠವು ಮಂಗಳವಾರ ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಎಎಪಿ ಶಾಸಕರು ನಡೆಸಿರುವ ಪ್ರತಿಭಟನೆ ಕುರಿತ ಮಾಹಿತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಸಾಂವಿಧಾನಿಕ ಪೀಠದ ಎದುರು ಅರ್ಜಿಯ ವಿಚಾರಣೆ ಬಾಕಿ ಇರುವಾಗ ಪ್ರತಿಭಟನೆಗಳನ್ನು ನಡೆಸುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅವರು ತಿಳಿಸಿದರು.

ಧರಣಿ: ಬಿಜೆಪಿಯ ಐವರು ಶಾಸಕರು ಅಮಾನತು
ದೆಹಲಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅತಿಶಿ ಅವರು ಗಮನ ಸೆಳೆಯುವ ಸೂಚನೆ ಮಂಡಿಸುವ ವೇಳೆ ಪ್ರತಿಭಟನೆ ನಡೆಸಿದ ಬಿಜೆಪಿಯ ಐವರು ಶಾಸಕರನ್ನು ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಅವರು ದಿನದ ಮಟ್ಟಿಗೆ ಅಮಾನತು ಮಾಡಿದರು.

ಅಜಯ್‌ ಮಹಾವರ್‌, ಜಿತೇಂದ್ರ ಮಹಾಜನ್‌, ಒ.‍ಪಿ.ಶರ್ಮಾ, ಅಭಯ್‌ ವರ್ಮಾ ಮತ್ತು ಅನಿಲ್‌ ಬಾಜಪೇಯಿ ಅಮಾನತಾದವರು. ಸ್ಪೀಕರ್‌ ಸೂಚನೆ ಮೇರೆಗೆ ಮಾರ್ಷಲ್‌ಗಳು ಇವರನ್ನು ಸದನದಿಂದ ಹೊರಗೆ ಕಳುಹಿಸಿದರು.

‘ತರಬೇತಿಗಾಗಿ ಶಿಕ್ಷಕರನ್ನು ಫಿನ್ಲೆಂಡ್‌ಗೆ ಕಳುಹಿಸುವ ಸರ್ಕಾರದ ಪ್ರಸ್ತಾವನೆಯನ್ನು ಲೆಫ್ಟಿನೆಂಟ್‌ ಗವರ್ನರ್‌ ತಿರಸ್ಕರಿಸಿದ್ದಾರೆ. ಇದು ಕಾನೂನು ಬಾಹಿರ ನಡೆ. ಅವರು ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ. ತಾವು ಬಿಜೆಪಿ ಏಜೆಂಟ್‌ ಅಲ್ಲ ಎಂಬುದನ್ನು ಮನಗಾಣಬೇಕು’ ಎಂದು ಅತಿಶಿ ಹೇಳಿದ್ದಾರೆ.

ಎಎಪಿ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಬಿಜೆಪಿ ಶಾಸಕರು ಮಂಗಳವಾರ ಕಪ್ಪು ಬಟ್ಟೆ ಹಾಗೂ ಟರ್ಬನ್‌ಗಳನ್ನು ಧರಿಸಿ ಸದನಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT