ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಆಯುಷ್ಯ ಕಡಿಮೆ

ಎನ್‌ಎಫ್‌ಎಚ್‌ಎಸ್‌ ದತ್ತಾಂಶ ಆಧಾರದಲ್ಲಿ ವಿಶ್ಲೇಷಣೆ
Last Updated 24 ಏಪ್ರಿಲ್ 2022, 17:46 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸಮಾಜದಲ್ಲಿ ಇರುವ ಜಾತಿ ಶ್ರೇಣೀಕರಣ ಮತ್ತು ಜನರ ನಿರೀಕ್ಷಿತ ಜೀವಿತಾವಧಿ ನಡುವೆ ನೇರ ಸಂಬಂಧ ಇದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಜೀವಿತಾವಧಿ ನಿರೀಕ್ಷೆಯು ಇತರ ಜಾತಿಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ದತ್ತಾಂಶಗಳನ್ನು ವಿಶ್ಲೇಷಿಸಿ ಮಾಡಿದ ಅಧ್ಯಯನವು ಹೇಳಿದೆ. ಅಧ್ಯಯನವು ಪಾಪ್ಯುಲೇಷನ್‌ ಆ್ಯಂಡ್‌ ಡೆವಲಪ್‌ಮೆಂಟ್‌ ರಿವ್ಯೂ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಎನ್‌ಎಫ್‌ಎಚ್‌ಎಸ್‌ನ 1997–2000 ಮತ್ತು 2013–2016ರ ಎರಡು ಸಮೀಕ್ಷೆಗಳ ದತ್ತಾಂಶಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ.

2013–16ರ ಅವಧಿಯಲ್ಲಿ ಪರಿಶಿಷ್ಟ ಪಂಗಡಗಳ ‍ಪುರುಷರ ನಿರೀಕ್ಷಿತ ಜೀವಿತಾವಧಿಯು (ಜನನ ಸಂದರ್ಭದಲ್ಲಿ) 62.4 ವರ್ಷ ಇತ್ತು. ಇದೇ ಅವಧಿಯಲ್ಲಿ, ಪರಿಶಿಷ್ಟ ಜಾತಿಯ ಪುರುಷರ ನಿರೀಕ್ಷಿತ ಜೀವಿತಾವಧಿಯು 63.3 ವರ್ಷ ಇತ್ತು. ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಗಂಡಸರ ಜೀವಿತಾವಧಿಯು ಈ ಎರಡೂ ಜಾತಿಗಳಿಗಿಂತ ಹೆಚ್ಚು ಇತ್ತು. ಈ ವರ್ಗದ ಪುರುಷರ ನಿರೀಕ್ಷಿತ ಜೀವಿತಾವಧಿಯು 65.5 ವರ್ಷ. ಮುಸ್ಲಿಂ ಗಂಡಸರ ನಿರೀಕ್ಷಿತ ಜೀವಿತಾವಧಿಯು ಇನ್ನೂ ಸ್ವಲ್ಪ ಹೆಚ್ಚು ಇದ್ದು, 66.8 ವರ್ಷಗಳಾಗಿವೆ. ಪ್ರಬಲ ಜಾತಿಗಳು ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರು 69.4 ವರ್ಷ ಜೀವಿಸಿರುತ್ತಾರೆ ಎಂಬ ನಿರೀಕ್ಷೆ ಇದೆ. ಅಂದರೆ, ಅತ್ಯಂತ ಕಡಿಮೆ ನಿರೀಕ್ಷಿತ ಜೀವಿತಾವಧಿ ಹೊಂದಿರುವ ಪರಿಶಿಷ್ಟ ಪಂಗಡಗಳ ಪುರುಷರಿಗಿಂತ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಯ ಜನರ ನಿರೀಕ್ಷಿತ ಜೀವಿತಾವಧಿಯು 7 ವರ್ಷ
ಗಳಷ್ಟು ಹೆಚ್ಚು.

ಮಹಿಳೆಯರ ನಿರೀಕ್ಷಿತ ಜೀವಿತಾವಧಿಯಲ್ಲಿಯೂ ಇದೇ ರೀತಿಯ ವ್ಯತ್ಯಾಸವನ್ನು ಗುರುತಿಸಲಾಗಿದೆ. ಜತೆಗೆ, ಎಲ್ಲ ವರ್ಗಗಳಲ್ಲಿಯೂ ಮಹಿಳೆಯರ ಆಯುಷ್ಯದ ನಿರೀಕ್ಷೆಯು ಪುರುಷರಿಗಿಂತ ಹೆಚ್ಚು ಇದೆ ಎಂಬುದನ್ನೂ ಗುರುತಿಸಲಾಗಿದೆ. ಪರಿಶಿಷ್ಟ ಪಂಗಡದ ಪುರುಷರ ನಿರೀಕ್ಷಿತ ಜೀವಿತಾವಧಿಯು ಪರಿಶಿಷ್ಟ ಜಾತಿಯ ಪುರುಷರ ನಿರೀಕ್ಷಿತ ಜೀವಿತಾವಧಿಗಿಂತ ಕಡಿಮೆ ಇದೆ.

ಆದರೆ, ಮಹಿಳೆಯರ ವಿಚಾರಕ್ಕೆ ಬಂದಾಗ ಪರಿಶಿಷ್ಟ ಪಂಗಡದ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು ಪರಿಶಿಷ್ಟ ಜಾತಿಯ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ಇದೆ. ಪರಿಶಿಷ್ಟ ಜಾತಿಯ ಮಹಿಳೆಯರು 67.8 ವರ್ಷ ಬದುಕುತ್ತಾರೆ ಎಂಬ ನಿರೀಕ್ಷೆ ಇದ್ದರೆ, ಪಂಗಡದ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು 68 ವರ್ಷ.

ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿಗಳು ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯಲ್ಲಿ ವ್ಯತ್ಯಾಸ ಇಲ್ಲ. ಎರಡೂ ವರ್ಗಗಳ ಮಹಿಳೆಯರು 69.4 ವರ್ಷ ಬದುಕುತ್ತಾರೆ ಎಂಬ ನಿರೀಕ್ಷೆ ಇದೆ. ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಮಹಿಳೆಯರು ಇತರ ವರ್ಗಗಳ ಮಹಿಳೆಯರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎಂಬ ನಿರೀಕ್ಷೆ ಇದೆ. ಇವರ ನಿರೀಕ್ಷಿತ ಜೀವಿತಾವಧಿಯು 72.2 ವರ್ಷ.

ಮಹಿಳೆಯರ ಸರಾಸರಿ ನಿರೀಕ್ಷಿತ ಜೀವಿತಾವಧಿಯು 69.6 ವರ್ಷ ಇದೆ. ಪ್ರಬಲ ಜಾತಿ ಎಂದು ಪರಿಗಣಿತವಾದ ಜಾತಿಗಳ ಮಹಿಳೆಯರು ಬದುಕುವ ಅವಧಿಯು ಇದಕ್ಕಿಂತಲೂ 2.6 ವರ್ಷ ಹೆಚ್ಚು. ಅತ್ಯಂತ ಕಡಿಮೆ ನಿರೀಕ್ಷಿತ ಜೀವಿತಾವಧಿ ಇರುವ ಪರಿಶಿಷ್ಟ ಜಾತಿಯ ಮಹಿಳೆಯರಿಗಿಂತ ಪ್ರಬಲ ಎಂದು ಪರಿಗಣಿಸಲಾಗುವ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು 4.4 ವರ್ಷ ಹೆಚ್ಚು ಎಂದು ಅಂದಾಜಿಸಲಾಗಿದೆ.

ಜಾಗತಿಕ ಸರಾಸರಿಗಿಂತ ಕಡಿಮೆ

ಭಾರತೀಯರ ಸರಾಸರಿ ನಿರೀಕ್ಷಿತ ಜೀವಿತಾವಧಿಯು ಜಾಗತಿಕ ಸರಾಸರಿ ನಿರೀಕ್ಷಿತ ಜೀವಿತಾವಧಿಗಿಂತ ಕಡಿಮೆ ಇದೆ. ವಿಶ್ವಬ್ಯಾಂಕ್‌ನ ಅಂದಾಜು ಪ್ರಕಾರ 2019ರಲ್ಲಿ ಭಾರತೀಯರ ನಿರೀಕ್ಷಿತ ಜೀವಿತಾವಧಿಯು 69.6 ವರ್ಷ ಇತ್ತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2019ರಲ್ಲಿ ಜಾಗತಿಕ ಸರಾಸರಿ ನಿರೀಕ್ಷಿತ ಜೀವಿತಾವಧಿಯು 73.4 ವರ್ಷ. ಹೀಗಾಗಿ, ಭಾರತೀಯರ ಸರಾಸರಿ ನಿರೀಕ್ಷಿತ ಜೀವಿತಾವಧಿಯು 3.8 ವರ್ಷ ಕಡಿಮೆ ಇದೆ. ಜಗತ್ತಿನಲ್ಲಿಯೇ ನಿರೀಕ್ಷಿತ ಜೀವಿತಾವಧಿ ಅತಿ ಹೆಚ್ಚು ಇರುವ ದೇಶ ಹಾಂಗ್‌ಕಾಂಗ್‌. ಇಲ್ಲಿನ ಜನರ ಸರಾಸರಿ ನಿರೀಕ್ಷಿತ ಜೀವಿತಾವಧಿಯು 84.7 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT