ಗುರುವಾರ , ಮೇ 6, 2021
22 °C

ಆರ್ಥಿಕ ಹಿತಾಸಕ್ತಿಯಲ್ಲ, ಜೀವ ಮುಖ್ಯ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ತರಾಟೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮನುಷ್ಯ ಜೀವಕ್ಕಿಂತ ಆರ್ಥಿಕ ಹಿತಾಸಕ್ತಿ ಮುಖ್ಯವಾಗಬಾರದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ದೆಹಲಿಯಲ್ಲಿ ಮತ್ತು ಇತರೆಡೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ‘ನಾವು ದೊಡ್ಡ ದುರಂತದತ್ತ ಸಾಗುತ್ತಿದ್ದೇವೆ. ಸುಮಾರು ಒಂದು ಕೋಟಿ ಜನರು ಸಾಯುವ ಅಪಾಯಿದೆ. ಅದನ್ನು ಸಹಿಸಿಕೊಳ್ಳಲು ನಿಮಗೆ ಆಗುತ್ತದೆಯೇ’ ಎಂದು ಪೀಠವು ಕೇಳಿದೆ. 

ಲಾಕ್‌ಡೌನ್‌ ಮುಂದುವರಿದರೆ ಎಲ್ಲವೂ ಸ್ಥಗಿತವಾಗಿಯೇ ಇರಲಿದೆ. ಹಾಗಿರುವಾಗ ಉಕ್ಕು, ಪೆಟ್ರೋಲ್‌, ಡೀಸೆಲ್‌ ಯಾರಿಗೆ ಬೇಕು. ಮನುಷ್ಯ ಜೀವಗಳು ಅಪಾಯದಲ್ಲಿರುವಾಗ ಆಮ್ಲ ಜನಕದ ಕೈಗಾರಿಕಾ ಬಳಕೆಗೆ ನಿಷೇಧ ಹೇರಲು ಇದೇ 22ರವರೆಗೆ ಏಕೆ ಕಾಯ
ಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು ಪ್ರಶ್ನಿಸಿದೆ. 

‘ಕೊರತೆ ಇರುವುದು ಈಗ. ಹಾಗಾಗಿ ನಿಷೇಧವನ್ನು ಈಗ ಜಾರಿ ಮಾಡಬೇಕು. ಉಕ್ಕು ಮತ್ತು ಪೆಟ್ರೋಲಿಯಂ ಕೈಗಾರಿಕೆ ಯಿಂದ ಆಮ್ಲಜನಕ ಪಡೆದುಕೊಳ್ಳಿ. ಅವರ ಜೇಬು, ಪ್ರಭಾವ ದೊಡ್ಡದು. ಹಾಗಿದ್ದರೂ ಉತ್ಪಾದನೆ ಕಡಿತ ಮಾಡಿ ಎಂದರೆ ಉತ್ಪಾದನೆ ಕಡಿತ ಮಾಡಲೇ ಬೇಕು. ಜೀವಗಳನ್ನು ಉಳಿಸಬೇಕಿದೆ ಎಂದು ಅವರಿಗೆ ನೇರವಾಗಿ ಹೇಳಿ’ ಎಂದು ಪೀಠವು ತಿಳಿಸಿದೆ. 

ಕೇಂದ್ರ ಸರ್ಕಾರದ ಪರ ವಕೀಲರೊಬ್ಬರ ತಂದೆಯ ಪರಿಸ್ಥಿತಿಯನ್ನು ಪೀಠವು ಉಲ್ಲೇಖಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಆಮ್ಲಜನಕದ ಬೆಂಬಲ ಬೇಕಾಗಿತ್ತು. ಆದರೆ, ಲಭ್ಯತೆ ಕೊರತೆಯಿಂದಾಗಿ ಕಡಿಮೆ ಒತ್ತಡದಲ್ಲಿ ಆಮ್ಲಜನಕ ಪೂರೈಸ
ಲಾಗಿತ್ತು. ಏಪ್ರಿಲ್‌ 22ರವರೆಗೆ ಕಾಯಿರಿ ಎಂದು ಅವರಿಗೆ ಹೇಳಲಾಗುತ್ತದೆಯೇ ಎಂದು ಪೀಠವು ಪ್ರಶ್ನಿಸಿತು. 

ದೆಹಲಿಗೆ ಆಮ್ಲಜನಕ ಪೂರೈಕೆಯಲ್ಲಿ ತೊಡಕು ಉಂಟಾಗಿಲ್ಲ. ಇದೇ 22ರಿಂದ ಕೈಗಾರಿಕಾ ಬಳಕೆ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು ಹೇಳಿದರು. ದೆಹಲಿ ಸೇರಿದಂತೆ ಎಲ್ಲ ರಾಜ್ಯಗಳು ವೈದ್ಯಕೀಯ ಆಮ್ಲಜನಕವನ್ನು ಮಿತವಾಗಿ ಬಳಸಬೇಕು ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು