ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವೃದ್ಧರ ಜೀವನ ಅಸಹನೀಯ

Last Updated 7 ಜನವರಿ 2021, 21:03 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹಿರಿಯ ನಾಗರಿಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಹಿರಿಯ ನಾಗರಿಕರಲ್ಲಿ ಶೇ 10ರಷ್ಟು ಮಂದಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ದೇಶದಲ್ಲಿ ಹಿರಿಯ ನಾಗರಿಕರ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಇದೇ ಮೊದಲ ಬಾರಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ.

ದೇಶದ ಹಿರಿಯ ನಾಗರಿಕರಲ್ಲಿ ಶೇ 14ರಷ್ಟು ಮಂದಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ದೈನಂದಿನ ಅತ್ಯಗತ್ಯ ಚಟುವಟಿಕೆಗಳಲ್ಲಿ ನೆರವು ದೊರೆಯದೇ ಇರುವುದರ ಬಗ್ಗೆ ಹಿರಿಯ ನಾಗರಿಕರು ಅತ್ಯಂತ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ನಾಗರಿಕರು ಎರಡು ತಿಂಗಳಿಗೆ ಒಮ್ಮೆಯಾದರೂ ಇಂತಹ ಕೆಟ್ಟ ಅನುಭವ ಹೊಂದಿದ್ದಾರೆ ಎಂದು ಸಮೀಕ್ಷೆಯು ಹೇಳುತ್ತದೆ. ಹಿರಿಯ ನಾಗರಿಕರನ್ನು ಹೀಗೆ ಕಡೆಗಣಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಬಿಹಾರವು ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.

ದೇಶದಲ್ಲಿ ಇದೇ ಮೊದಲ ಬಾರಿ ಇಂತಹ ಸಮೀಕ್ಷೆ ನಡೆಸಲಾಗಿದೆ. 72,250 ಹಿರಿಯ ನಾಗರಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಶೇ 75ರಷ್ಟು ಮಂದಿ ಒಂದಲ್ಲ ಒಂದು ರೀತಿಯ ದೀರ್ಘಾವಧಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶೇ 40ರಷ್ಟು ಮಂದಿ ದೈಹಿಕ ನ್ಯೂನತೆ ಹೊಂದಿದ್ದಾರೆ. ಶೇ 20ರಷ್ಟು ಮಂದಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶೇ 40ರಷ್ಟು ಮಂದಿ ಶ್ವಾಸಕೋಶದ ಸಮಸ್ಯೆ, ಪ್ರತಿ 10ರಲ್ಲಿ ಒಬ್ಬರು ನಿದ್ರೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಅಗತ್ಯ ವೈದ್ಯಕೀಯ ಸೇವೆ ದೊರೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

2011ರ ಗಣತಿಯ ಪ್ರಕಾರ ದೇಶದಲ್ಲಿ 10 ಕೋಟಿಯಷ್ಟು ಹಿರಿಯ ನಾಗರಿಕರು ಇದ್ದರು. 2050 ವೇಳೆಗೆ ಹಿರಿಯ ನಾಗರಿಕರ
ಸಂಖ್ಯೆ 30.2 ಕೋಟಿ ಮುಟ್ಟುವ ಸಾಧ್ಯತೆ ಇದೆ.

ರಾಜ್ಯದಲ್ಲಿ ವೃದ್ಧರ ಸ್ಥಿತಿಗತಿ

* 45 ವರ್ಷ ಮತ್ತು ಅದಕ್ಕಿಂತಲೂ ಹೆಚ್ಚಿನ ವಯಸ್ಸಿನವರಲ್ಲಿ ಶೇ 50ರಷ್ಟು ಮಂದಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮತ್ತು ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚು

* 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇ 10ರಷ್ಟು ಮಂದಿ ಗಂಭೀರ ಸ್ವರೂಪದ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮತ್ತು ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚು

* 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಪ್ರತಿ ಮೂವರಲ್ಲಿ ಒಬ್ಬರು ದೃಷ್ಟಿದೋಷ ಮತ್ತು ಶ್ರವಣದೋಷದಿಂದ ಬಳಲುತ್ತಿದ್ದಾರೆ. ಇದು ಬೇರೆ ರಾಜ್ಯಗಳಿಗಿಂತ ಹೆಚ್ಚು. ದೇಶದಲ್ಲಿ ಪ್ರತಿ ಆರು ಹಿರಿಯ ನಾಗರಿಕರಲ್ಲಿ ಒಬ್ಬರು ಮಾತ್ರ ಈ ಸಮಸ್ಯೆ ಎದುರಿಸುತ್ತಿದ್ದಾರೆ

* ರಾಜ್ಯದ ಹಿರಿಯ ನಾಗರಿಕರು ಆರೋಗ್ಯ ಸೇವೆಗಾಗಿ ಬಹುಪಾಲು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ವಿವಿಧ ಚಿಕಿತ್ಸೆಗಳಿಗಾಗಿ ರಾಜ್ಯದ ಹಿರಿಯ ನಾಗರಿಕರು ಸರಾಸರಿ ₹ 1.25 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ದೇಶದ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಈ ವೆಚ್ಚ ಹೆಚ್ಚು

* ರಾಜ್ಯದ ಶೇ 60ಕ್ಕೂ ಹೆಚ್ಚು ಹಿರಿಯ ನಾಗರಿಕರು ದೈನಂದಿನ ಅತ್ಯಗತ್ಯ ಚಟುವಟಿಕೆಗಳನ್ನು ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ವೃದ್ಧ ಮಹಿಳೆಯರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು

* ರಾಜ್ಯದ ಶೇ 40ರಷ್ಟು ಹಿರಿಯ ನಾಗರಿಕರು ತಮ್ಮ ದೈನಂದಿನ ಅತ್ಯಗತ್ಯ ಚಟುವಟಿಕೆಗಳನ್ನು ನಡೆಸಲು ಇತರರ ನೆರವನ್ನು ಅವಲಂಬಿಸಿದ್ದಾರೆ

*ರಾಜ್ಯದ ಬಹುಪಾಲು ಹಿರಿಯ ನಾಗರಿಕರು ಶೌಚಾಲಯಗಳನ್ನು ಬಳಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ

* ರಾಜ್ಯದ ಪ್ರತಿ ಐವರು ಹಿರಿಯ ನಾಗರಿಕರಲ್ಲಿ ಒಬ್ಬರು ಸ್ನಾನ, ಉಡುಗೆ ಧರಿಸುವುದು, ವೈಯಕ್ತಿಕ ಸ್ವಚ್ಛತೆ ನಿರ್ವಹಣೆ ಮತ್ತು ಕೂತಲ್ಲಿಂದ ಹಾಗೂ ಮಲಗಿದ್ದಲ್ಲಿಂದ ಜಾಗ ಬದಲಿಸಲು ತೊಂದರೆ ಅನುಭವಿಸುತ್ತಿದ್ದಾರೆ

ಕೆಟ್ಟ ಅನುಭವ ಎದುರಿಸುತ್ತಿರುವ ವೃದ್ಧರ ಪ್ರಮಾಣ

12 % ಬಿಹಾರ

10 % ಕರ್ನಾಟಕ

8 % ಪಶ್ಚಿಮ ಬಂಗಾಳ

6 % ಉತ್ತರ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT