ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರಬಡ್ಡಿ ಮನ್ನಾ: ನ. 2ರೊಳಗೆ ಜಾರಿಗೆ ‘ಸುಪ್ರೀಂ’ ಸೂಚನೆ

Last Updated 14 ಅಕ್ಟೋಬರ್ 2020, 20:11 IST
ಅಕ್ಷರ ಗಾತ್ರ

ನವದೆಹಲಿ: ಸಾಲ ಮರುಪಾವತಿ ಮುಂದೂಡಿಕೆಯ ಆರು ತಿಂಗಳ ಚಕ್ರಬಡ್ಡಿ ಮನ್ನಾ ನಿರ್ಧಾರದ ಜಾರಿಗೆ ಇನ್ನೂ ಒಂದು ತಿಂಗಳು ಬೇಕು ಎಂಬ ಕೇಂದ್ರ ಸರ್ಕಾರದ ಬೇಡಿಕೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಾಮಾನ್ಯ ಜನರ ದೀಪಾವಳಿ ಸಂಭ್ರಮ ಈಗ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದೂ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.

ಚಕ್ರಬಡ್ಡಿ ಮನ್ನಾ ಸಂಬಂಧದ ಅಧಿಸೂಚನೆಯನ್ನು ನವೆಂಬರ್‌ 2ರೊಳಗೆ ಹೊರಡಿಸುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿದೆ.

₹2 ಕೋಟಿ ವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ನಿರ್ಧಾರವನ್ನು ಜಾರಿಗೆ ತರಲು ಒಂದು ತಿಂಗಳು ಬೇಕಾಗುವುದಿಲ್ಲ ಎಂದು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಪೀಠವು ಹೇಳಿತು.

ಚಕ್ರಬಡ್ಡಿಯನ್ನು ಮನ್ನಾ ಮಾಡುವ ಸರ್ಕಾರದ ನಿರ್ಧಾರವು ಸ್ವಾಗತಾರ್ಹ. ಆದರೆ, ಈ ವಿಷಯದಲ್ಲಿ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ. ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದಿತು.

ಸಾಮಾನ್ಯ ಜನರಿಗೆ ಆದಷ್ಟು ಬೇಗನೆ ಪ್ರಯೋಜನ ದೊರಕುವಂತೆ ಕೇಂದ್ರವು ತನ್ನ ನಿರ್ಧಾರವನ್ನು ಜಾರಿಗೆ ತರಬೇಕು. ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರವು ತಮ್ಮ ಪರವಾಗಿ ನಿರ್ಧಾರ ಕೈಗೊಂಡಿದೆ ಎಂಬುದು ಜನರಿಗೆ ತಿಳಿದಿದೆ. ಆದರೆ, ಅದರ ಫಲಿತಾಂಶ ಅವರಿಗೆ ದೊರೆಯುವಂತೆ ಆಗಬೇಕು ಎಂದು ಪೀಠವು ಹೇಳಿದೆ.

ಚಕ್ರಬಡ್ಡಿಯನ್ನು ಬ್ಯಾಂಕುಗಳು ಮನ್ನಾ ಮಾಡಲಿವೆ. ಈ ಮೊತ್ತವನ್ನು ಸರ್ಕಾರವು ಬ್ಯಾಂಕುಗಳಿಗೆ ಬಳಿಕ ಪಾವತಿಸಲಿದೆ ಎಂದು ಮೆಹ್ತಾ ಅವರು ವಿವರಿಸಿದರು.

ನಿರ್ಧಾರದ ಜಾರಿಯಲ್ಲಿ ಅನಗತ್ಯ ವಿಳಂಬ ಮಾಡಲು ಸರ್ಕಾರಕ್ಕೂ ಮನಸ್ಸಿಲ್ಲ. ಆದರೆ, ಕೆಲವು ಪ್ರಕ್ರಿಯೆಗಳಿಗೆ ಸಮಯ ಬೇಕಾಗುತ್ತದೆ. ಚಕ್ರಬಡ್ಡಿ ಮೊತ್ತ ಎಷ್ಟು ಎಂಬುದನ್ನು ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ಬ್ಯಾಂಕುಗಳು ಸಲ್ಲಿಸಬೇಕಾಗುತ್ತದೆ. ಇದಕ್ಕೆಲ್ಲ ಸಮಯ ಬೇಕು ಎಂದು ಅವರು ಹೇಳಿದರು.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಸಾಲದ ಕಂತು ಮರುಪಾವತಿ ಅವಧಿಯನ್ನು ಮುಂದೂಡಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಚ್‌ 27ರಂದು ಸುತ್ತೋಲೆ ಹೊರಡಿಸಿತ್ತು. ಬಳಿಕ, ಮರುಪಾವತಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT