ಮಂಗಳವಾರ, ಮೇ 17, 2022
27 °C

ಲೋಕಸಭೆ ಸುಗಮ ಕಲಾಪಕ್ಕೆ ವಿರೋಧ ಪಕ್ಷಗಳ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರ ಮನವಿಗೆ ಸ್ಪಂದಿಸಿರುವ ವಿರೋಧ ಪಕ್ಷಗಳು, ಲೋಕಸಭೆ ಕಲಾಪವನ್ನು ಸುಗಮವಾಗಿ ನಡೆಸಲು ಒಪ್ಪಿಗೆ ಸೂಚಿಸಿವೆ. ಒಂದು ವಾರದಿಂದ ಉದ್ಭವಿಸಿದ್ದ ಬಿಕ್ಕಟ್ಟು ನಿವಾರಣೆಯಾದಂತಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದವು. ಒಂದು ವಾರದಿಂದ ಕಲಾಪ ಸುಗಮವಾಗಿ ನಡೆದಿರಲಿಲ್ಲ. ಸೋಮವಾರ
ಸಂಜೆ 5ಕ್ಕೆ ಸದನ ಕಲಾಪ ಪುನರಾರಂಭವಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರು ಕಲಾಪವನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ರಾಷ್ಟ್ರಪತಿಗಳ ಭಾಷಣ ಮೇಲೆ ವಂದನಾ ನಿರ್ಣಯ ಅಂಗೀಕರಿಸುವ ಸಂಪ್ರದಾಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ ಎಂದು ರಾಜನಾಥ್‌ಸಿಂಗ್‌ ಹೇಳಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆ ನಂತರ ರಾಜ್ಯಸಭೆಯು ವಂದನಾ ನಿರ್ಣಯವನ್ನು ಅಂಗೀಕರಿಸಿದೆ. ಲೋಕಸಭೆಯಲ್ಲಿ ಈ ಸಂಪ್ರದಾಯ
ಮುರಿಯಬಾರದು ಎಂದು ವಿರೋಧ ಪಕ್ಷಗಳ ನಾಯಕರಲ್ಲಿ ಮನವಿ ಮಾಡಿದರು. ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಮ್ಮತಿ
ವ್ಯಕ್ತಪಡಿಸಿದರು.

ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಎಲ್ಲ ಸದಸ್ಯರಿಗೂ ಮುಕ್ತ ಅವಕಾಶವಿದೆ ಎಂದು ಸಿಂಗ್‌ ಹೇಳಿದರು.

‘ವಂದನಾ ನಿರ್ಣಯ ಅಂಗೀಕರಿಸುವ ಕುರಿತು 1921ರಿಂದಲೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದ್ದು, ಇದನ್ನು ಮುರಿಯುವ ಪ್ರಶ್ನೆಯೇ ಇಲ್ಲ. ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಇದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮ ವಿಷಾದನೀಯ. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಅಥವಾ ಬಜೆಟ್‌ ಚರ್ಚೆಯ ನಂತರ ರೈತರ ವಿಷಯದ ಬಗ್ಗೆ ಸ್ವತಂತ್ರ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಭರವಸೆ ನೀಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ರಂಜನ್‌ ಚೌಧರಿ ಹೇಳಿದರು.

ಇದಕ್ಕೂ ಮುನ್ನ ವಿವಿಧ ಪಕ್ಷಗಳ ನಾಯಕರ ಸಭೆ ನಡೆಸಿದ ಸ್ಪೀಕರ್‌ ಓಂ ಬಿರ್ಲಾ ಅವರು, ಕಲಾಪವು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು