ಶನಿವಾರ, ಸೆಪ್ಟೆಂಬರ್ 25, 2021
24 °C

ಲೋಕಸಭೆ: ಪೂರ್ವಾನ್ವಯ ತೆರಿಗೆ ರದ್ದತಿ ಮಸೂದೆ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಗಾಸಸ್‌ ತನಿಖೆ ಹಾಗೂ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮುಂದುವರಿದಿದ್ದರಿಂದ, ಸಂಸತ್ತಿನ ಉಭಯ ಸದನಗಳ ಕಲಾಪ ಶುಕ್ರವಾರವೂ ಸುಗಮವಾಗಿ ನಡೆಯಲಿಲ್ಲ.

ಈ ಮಧ್ಯೆ, ಲೋಕಸಭೆಯು ಪೂರ್ವಾನ್ವಯ ತೆರಿಗೆ ರದ್ದತಿ ಮಸೂದೆ ಸೇರಿದಂತೆ ಎರಡು ಮಸೂದೆಗಳಿಗೆ ಅಂಗೀಕಾರ ನೀಡಿತು. ಬೆಳಿಗ್ಗೆ ಕಲಾಪ ಸೇರಿದಾಗ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಸ್ಪೀಕರ್‌ ಓ ಬಿರ್ಲಾ ಅವರ ಮನವಿಗೆ ಕಿವಿಗೊಡಲಿಲ್ಲ. ಆಗ, ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನವೂ ಪ್ರತಿಭಟನೆ ಮುಂದುವರಿಯಿತು. ಇದರ ನಡುವೆಯೇ, ಕೇವಲ ಎಂಟು ನಿಮಿಷಗಳಲ್ಲಿ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ–2021 ಧ್ವನಿಮತದಿಂದ ಅಂಗೀಕಾರವಾಯಿತು.

ಹೊಸ ಮಸೂದೆಯು, ಪರೋಕ್ಷ ಹಣ ವರ್ಗಾವಣೆಗೆ ಸಂಬಂಧಿಸಿದ ಪೂರ್ವಾನ್ವಯ ತೆರಿಗೆಯನ್ನು ಹಿಂದೆಗೆದುಕೊಳ್ಳುವುದರ ಮೂಲಕ ಭಾರತದಲ್ಲಿನ ವಿದೇಶಿ ಹೂಡಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ಇದರ ಅನ್ವಯ, 2012, ಮೇ 28ಕ್ಕಿಂತ ಮೊದಲಿನ ವ್ಯವಹಾರಗಳಿಗಾಗಿ, ಉದ್ಯಮಗಳಿಗೆ ವಿಧಿಸಲಾದ ಪೂರ್ವಾನ್ವಯ ತೆರಿಗೆಯು ರದ್ದಾಗಲಿದೆ.

ಲಡಾಖ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಅನುಮತಿ ನೀಡುವ, ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ–2021 ಕೂಡ ಅಂಗೀಕಾರ
ಪಡೆಯಿತು.

ಇದಾದ ನಂತರ, ಸಭಾಧ್ಯಕ್ಷ ಸ್ಥಾನದಲ್ಲಿದ್ದ ರಾಜೇಂದ್ರ ಅಗರವಾಲ್‌, ಕಲಾಪವನ್ನು ಮುಂದೂಡಿದರು. ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಕಲಾಪವನ್ನು ಮುಂದೂಡಲಾಯಿತು. ಉಭಯ ಸದನದ ಕಲಾಪ ಪುನಃ ಸೋಮವಾರ ಆರಂಭವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು