ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಗೆ ಪ್ರತ್ಯೇಕ ಒಬಿಸಿ ಪಟ್ಟಿ ಅಧಿಕಾರ: ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ

Last Updated 10 ಆಗಸ್ಟ್ 2021, 20:28 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಗಳಿಗೆ ಪ್ರತ್ಯೇಕವಾಗಿ ತಮ್ಮದೇ ಆದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು (ಒಬಿಸಿ) ಸಿದ್ಧಪಡಿಸಿಕೊಳ್ಳಲು ಅಧಿಕಾರ ನೀಡುವ, ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಪಕ್ಷಭೇದ ಮರೆತು ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು. ಉಳಿದಂತೆ ಪೆಗಾಸಸ್ ವಿಚಾರವಾಗಿ, ದಿನದ ಕಲಾಪ ಕಳೆದುಹೋಯಿತು.

385 ಸದಸ್ಯರ ಒಪ್ಪಿಗೆ ಸಿಕ್ಕಿತು. ಯಾರೂ ಆಕ್ಷೇಪ ಎತ್ತಲಿಲ್ಲ. ಆದರೆ ವಿರೋಧ ಪಕ್ಷದ ಸದಸ್ಯರು ಮಂಡಿಸಿದ ಕೆಲವು ತಿದ್ದುಪಡಿಗಳನ್ನು ಸದನ ತಿರಸ್ಕರಿಸಿತು.ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದ ಅಗತ್ಯವಿದೆ.

‘ಸಂವಿಧಾನ (127ನೇ ತಿದ್ದುಪಡಿ) ಮಸೂದೆ–2021’ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಮೀಸಲಾತಿಯ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದವು. ಆದರೆ ಸರ್ಕಾರವು, ಸಾಮಾಜಿಕ ನ್ಯಾಯದ ಬಗೆಗಿನ ತನ್ನ ಬದ್ಧತೆಯನ್ನು ಒತ್ತಿಹೇಳಿತು.

ಜುಲೈ 19ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ನಂತರ ಮೊದಲ ಬಾರಿಗೆ ಕಲಾಪವು ಕ್ರಮಬದ್ಧ ಚರ್ಚೆಗೆ ಸಾಕ್ಷಿಯಾಯಿತು. ಪೆಗಾಸಸ್ ಗೂಢಚರ್ಯೆ ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳು, ಮಸೂದೆಗೆ ಅಂಗೀಕಾರ ನೀಡುವ ಸಂದರ್ಭದಲ್ಲಿ ಪ್ರತಿಭಟನೆ
ಸ್ಥಗಿತಗೊಳಿಸಿದ್ದವು.

ಸಂವಿಧಾನದ 127ನೇ ತಿದ್ದುಪಡಿ ಮಸೂದೆ–2021 ಅನ್ನು ಐತಿಹಾಸಿಕ ಎಂದು ಕರೆದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್, ದೇಶದ 671 ಜಾತಿಗಳು ಇದರಿಂದ ಪ್ರಯೋಜನ ಪಡೆಯುತ್ತವೆ ಎಂದರು.ತಮ್ಮದೇ ಆದ ಪ್ರತ್ಯೇಕ ಒಬಿಸಿ ಪಟ್ಟಿಯನ್ನು ರಾಜ್ಯಗಳು ಸಿದ್ಧಪಡಿಸಲು ಈಮಸೂದೆಯು ಅಧಿಕಾರ ನೀಡುವುದರಿಂದ, ವಿವಿಧ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ರಚನೆ, ಕರ್ತವ್ಯಗಳು, ಅಧಿಕಾರಗಳನ್ನು ತಿಳಿಸುವ 338ಬಿ ಕಲಂ ಹಾಗೂಒಂದು ನಿರ್ದಿಷ್ಟ ಜಾತಿಯನ್ನು ಎಸ್‌ಇಬಿಸಿ ಎಂದು ಘೋಷಿಸಲು ಮತ್ತು ಅಧ್ಯಕ್ಷರ ಅಧಿಕಾರಗಳನ್ನು ತಿಳಿಸುವ342ಎ ಕಲಂಗಳನ್ನು2018ರ 102ನೇ ಸಂವಿಧಾನ ತಿದ್ದುಪಡಿ ಕಾಯಿದೆಯು ಸೇರಿಸಿತ್ತು. ಸಂವಿಧಾನದ 102ನೇ ತಿದ್ದುಪಡಿಯು ಉದ್ಯೋಗ ಮತ್ತು ಶಿಕ್ಷಣದಲ್ಲಿಮೀಸಲಾತಿ ನೀಡಲು ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ತಿಳಿಸುತ್ತದೆ. ಈ ಕಾಯ್ದೆಯ ಅಂಶಗಳನ್ನು ಎತ್ತಿಹಿಡಿದಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ್ದ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಲೋಕಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಸೂದೆಗೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದರು. ಆದರೆ, 2018ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಸರ್ಕಾರದ ಕ್ರಮವನ್ನು ಟೀಕಿಸಿದರು. ಸರ್ಕಾರವು ಪ್ರತಿಪಕ್ಷಗಳು ನೀಡಿದ್ದ ಸಲಹೆ ಸ್ವೀಕರಿಸಿದ್ದರೆ ಇಂದಿನ ಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಹೇಳಿದರು.

‘ನೀವು 2018ರಲ್ಲಿ 102ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರುವ ಮೂಲಕ ಸಂವಿಧಾನ ತಿರುಚಿದ್ದೀರಿ. ಹೀಗಾಗಿ ಜನರು ನ್ಯಾಯಾಲಯಕ್ಕೆ ಹೋಗಬೇಕಾಯಿತು. ಅಂತಿಮವಾಗಿ ಸುಪ್ರೀಂ ಕೋರ್ಟ್, ರಾಜ್ಯಗಳ ಅಧಿಕಾರ ತೆಗೆದುಹಾಕುವಂತಾಯಿತು’ ಎಂದರು.

ಪೆಗಾಸಸ್ ಚರ್ಚೆಯಿಂದ ಸರ್ಕಾರ ಓಡಿಹೋಗಿದೆ ಎಂದು ಆರೋಪಿಸಿದಚೌಧರಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಂಗೇರಿ, ಅಮೆರಿಕ ಮತ್ತು ಇಸ್ರೇಲ್‌ನಂತಹ ದೇಶಗಳು ವಿವಾದಾತ್ಮಕವಾದ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿವೆ ಎಂದು ಹೇಳಿದರು.

ಜೆಡಿಯುನ ಲಾಲನ್ ಸಿಂಗ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‌ಪಿಯ ರಿತೇಶ್ ಪಾಂಡೆ ಮತ್ತು ಡಿಎಂಕೆಯ ಟಿ.ಆರ್. ಬಾಲು ಮೊದಲಾದ ಅನೇಕ ನಾಯಕರು ದೇಶಾದ್ಯಂತ ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿದರು.ಮೀಸಲಾತಿ ಮೇಲಿರುವ ಶೇ 50ರ ಮಿತಿ ತೆಗೆದುಹಾಕುವಂತೆ ಕಾಂಗ್ರೆಸ್, ಡಿಎಂಕೆ ಹಾಗೂ ಎಸ್‌ಪಿ ಒತ್ತಾಯಿಸಿದವು.

ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್, ‘ಮೋದಿ ಸರ್ಕಾರದಿಂದ ದಲಿತರು, ಒಬಿಸಿಗಳು ಮತ್ತು ಬಡವರಿಗೆ ನ್ಯಾಯ ಒದಗಿಸಲು ಗರಿಷ್ಠ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ಹೈಡ್ರಾಮಾ:

ರೈತರ ಸಮಸ್ಯೆ ಮೇಲಿನ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ನಾಟಕೀಯ ಸನ್ನಿವೇಶ ಸೃಷ್ಟಿಯಾಯಿತು. ಕಲಾಪವನ್ನು ಮುಂದೂಡಿದ ಬಳಿಕ ವಿರೋಧ ಪಕ್ಷದ ಇಬ್ಬರು ಸದಸ್ಯರು ಮೇಜಿನ ಮೇಲೆ ಹತ್ತಿದರು. ಒಬ್ಬರು ಕಪ್ಪುಬಟ್ಟೆಯನ್ನು ಪ್ರದರ್ಶಿಸಿದರೆ, ಮತ್ತೊಬ್ಬರು ಸಭಾಪತಿಗಳ ಪೀಠದತ್ತ ಕಡತವೊಂದನ್ನು ಎಸೆದರು. ಐದಕ್ಕೂ ಹೆಚ್ಚು ಸಂಸದರು ಮೇಜು ಹತ್ತಿ ಕುಳಿತರು.

ಪ್ರತಿಪಕ್ಷಗಳ ಸಂಸದರು ಸಭಾಧ್ಯಕ್ಷದ ಮುಂದಿನ ಮೇಜಿನ ಮೇಲೆ ಸುಮಾರು 100 ನಿಮಿಷಗಳ ಕಾಲ ಹತ್ತಿ ಕುಳಿತಿದ್ದರು. ಮಧ್ಯಾಹ್ನ 2.16ರಿಂದ ಸಂಜೆ 4.01ರವರೆಗೂ ಈ ಪ್ರಹಸನ ಮುಂದುವರಿಯಿತು. ಈ ವೇಳೆ ಸದನವನ್ನು ಹಲವು ಬಾರಿ ಮುಂದೂಡಲಾಯಿತು. ಉಪಸಭಾಪತಿ ಭುವನೇಶ್ವರ್ ಕಲಿತಾ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಬೇಕಾಯಿತು.

ಸದನದಲ್ಲಿ ನಡೆದ ಘಟನೆಯನ್ನು ಮಿತಿ ಮೀರಿದ ಅಸಾಂವಿಧಾನಿಕ ನಡವಳಿಕೆ ಎಂದು ಸರ್ಕಾರ ಕರೆಯಿತು. ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷಗಳು, ತಮಗೆ ಬೇಕಿರುವುದು ಕೃಷಿ ಕುರಿತ ಕಾವ್ಯಾತ್ಮಕ ಚರ್ಚೆಯಲ್ಲ. ಬದಲಾಗಿ ವಿವಾದಾತ್ಮಕ ಕೃಷಿ ಕಾನೂನು ರದ್ದತಿ ಮತ್ತು ರೈತರ ಪ್ರತಿಭಟನೆ ಕುರಿತು ಒಂದು ನಿರ್ದಿಷ್ಟ ಚರ್ಚೆ ಎಂದು ಹೇಳಿದವು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುಂಗಾರು ಅಧಿವೇಶನದಲ್ಲಿ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಾಗ ರಾಜ್ಯಸಭೆಯು ಇದೇ ರೀತಿಯ ಸನ್ನಿವೇಶವನ್ನು ಕಂಡಿತ್ತು. ವಿರೋಧ ಪಕ್ಷಗಳ ಸಂಸದರು ಸಭಾಪತಿ ಎದುರಿನ ಪೀಠದ ಎದುರು ಜಮಾಯಿಸಿ, ಘೋಷಣೆಗಳನ್ನು ಕೂಗಿ, ನಿಯಮಾವಳಿ ಪುಸ್ತಕವನ್ನು ಕುರ್ಚಿಯ ಮೇಲೆ ಎಸೆದಿದ್ದರು. ಮೈಕ್ರೊಫೋನ್ ಮುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರತಿಪಕ್ಷಗಳ ಎಂಟು ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸದನ ಸಭೆ ಸೇರುತ್ತಿದ್ದಂತೆ, ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು 2015ರಲ್ಲಿ ಸಭಾಪತಿಗಳ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದರು. ಸದನದ ಗಮನಕ್ಕೆ ತಾರದೇ ತಮ್ಮ ‘ಗಮನ ಸೆಳೆಯುವ ಸೂಚನೆ’ಯನ್ನು ಅಲ್ಪಾವಧಿಯ ಚರ್ಚೆಯಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು. ಈ ನಿರ್ಧಾರವು ಏಕಪಕ್ಷೀಯ ಎಂದು ಹೇಳಿದರು. ಅಂತಹ ವಿಷಯ ಎಂದಿಗೂ ಸಂಭವಿಸಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಉಪಸಭಾಪತಿ ಹೇಳಿದರು.ಹೀಗಾಗಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುತ್ತಾ ಪೀಠದ ಎದುರು ಬಂದರು. ಎಎಪಿ ಸಂಸದ ಸಂಜಯ್ ಸಿಂಗ್ ಅವರು ಮೊದಲಿಗೆ ಮೇಜು ಹತ್ತಿ ಕಪ್ಪುಬಟ್ಟೆ ಪ್ರದರ್ಶಿಸಿದರು. ಹೀಗಾಗಿಕಲಾಪ ಮುಂದೂಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಯಿತು. ಅಧಿವೇಶನವನ್ನು ದಿನದ ಮಟ್ಟಿಗೆ ಮುಂದೂಡುವವರೆಗೂ ಸಂಸದರು ಮೇಜಿನಿಂದ ಕೆಳಗಿಳಿಯಲಿಲ್ಲ.

ಮಾರ್ಷಲ್‌ಗಳು ಸಿಂಗ್ ಅವರನ್ನು ಮೇಜಿನಿಂದ ಕೆಳಗಿಳಿಸಿದಾಗ ಸದನವನ್ನು ಮುಂದೂಡಲಾಯಿತು. ಕಾಂಗ್ರೆಸ್‌ನ ಪ್ರತಾಪಸಿಂಹ ಬಾಜ್ವಾ ಮೇಜು ಹತ್ತಿ ಘೋಷಣೆಗಳನ್ನು ಕೂಗಿ, ನಂತರ ಕಡತವೊಂದನ್ನು ಕುರ್ಚಿಯ ಮೇಲೆ ಎಸೆದರು. ಕಾಂಗ್ರೆಸ್‌ನ ರಿಪುನ್ ಬೋರಾ ಕೂಡ ಮೇಜಿನ ಮೇಲೆ ಸ್ವಲ್ಪ ಹೊತ್ತು ನಿಂತಿದ್ದರು.

ವಿರೋಧ ಪಕ್ಷಗಳ ಘೋಷಣೆಗೆ ಬಿಜೆಪಿ ಸಂಸದರು ಪ್ರತಿ ಘೋಷಣೆಗಳನ್ನು ಕೂಗಿದರು.ವಿರೋಧ ಪಕ್ಷಗಳ ಹಲವು ಸಂಸದರು ಕಪ್ಪು ಅಂಗಿ, ಕುರ್ತಾ ಮತ್ತು ಸೀರೆ ಧರಿಸಿದ್ದರೆ, ಇನ್ನೂ ಕೆಲವರು ಕಪ್ಪು ಶಾಲು, ಕಪ್ಪು ಬ್ಯಾಂಡ್ ಮತ್ತು ಕಪ್ಪು ಮುಖವಾಡ ಧರಿಸಿದ್ದರು.

ಸದನವು ಮರುಸೇರ್ಪಡೆಯಾದಾಗ, ಸಿಪಿಐನ ಬಿನೋಯ್ ವಿಶ್ವಂ, ಸಿಪಿಎಂ ಸಂಸದ ವಿ.ಶಿವದಾಸನ್, ಕಾಂಗ್ರೆಸ್‌ನ ದೀಪೇಂದರ್ ಹೂಡಾ, ರಿಪುನ್ ಬೋರಾ ಮತ್ತು ರಾಜಮಣಿ ಪಟೇಲ್, ಡಿಎಂಕೆಯ ಎಂ. ಷಣ್ಮುಘಂ ಮತ್ತು ತೃಣಮೂಲ ಕಾಂಗ್ರೆಸ್‌ನ ಮೌಸಮ್ ನೂರ್ ಅವರೂ ಜೊತೆಗೂಡಿದರು. ಕೊನೆಗೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT