ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ವಿರುದ್ಧ ಸಂಸತ್‌ನಲ್ಲಿ ಘೋಷಣೆ: ಕಲಾಪ ನಾಳೆಗೆ ಮುಂದೂಡಿಕೆ

Last Updated 2 ಫೆಬ್ರುವರಿ 2023, 9:46 IST
ಅಕ್ಷರ ಗಾತ್ರ

ನವದೆಹಲಿ: ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಕೆ–ಇಳಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಅದಾನಿ ಕಂಪನಿಯನ್ನು ಸಕ್ಷಮ ಪ್ರಾಧಿಕಾರದಿಂದ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಗುರುವಾರ ಸಂಸತ್‌ನಲ್ಲಿ ಗದ್ದಲ ಎಬ್ಬಿಸಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಉಬಯ ಸದನಗಳ ಕಲಾಪವನ್ನು ನಾಳೆ 11ಕ್ಕೆ (ಶುಕ್ರವಾರಕ್ಕೆ) ಮುಂದೂಡಿದ್ದಾರೆ.

ಅದಾನಿ ವಿರುದ್ಧ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದವು.

ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಹಾಗೂ ಉದ್ಯಮದಲ್ಲಿ ಅವ್ಯವಹಾರ ನಡೆಸಿದೆ ಎಂಬುದಾಗಿ ಹಿಂಡನ್‌ಬರ್ಗ್ ರಿಸರ್ಚ್‌ ಸಂಸ್ಥೆ ತನ್ನ ವರದಿಯಲ್ಲಿ ಆರೋಪಿಸಿದ್ದು, ಅದಾನಿ ಕಂಪನಿಗಳಲ್ಲಿ ಎಸ್‌ಬಿಐ ಹಾಗೂ ಎಲ್‌ಐಸಿ ಮಾಡಿರುವ ಹೂಡಿಕೆಯ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿವೆ.

ಬಜೆಟ್ ಅಧಿವೇಶಕ್ಕೂ ಮುನ್ನ, ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಅದಾನಿ ಸಮೂಹದ ಮೇಲೆ ಇರುವ ಅಕ್ರಮ ಆರೋಪ, ರಾಜ್ಯಪಾಲರ ನಡೆ ಹಾಗೂ ಇತರ ವಿಚಾರಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದವು.

ಅಲ್ಲದೇ ಬಿಜೆಪಿ ಹೊರತುಪಡಿಸಿ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಅನಗತ್ಯವಾಗಿ ಹಸ್ತಕ್ಷೇಪ ನಡೆಸುತ್ತಿದ್ದು, ಅವರು ರಾಜಕೀಯಕ್ಕೆ ಇಳಿದಿದ್ದಾರೆ ಹಾಗೂ ಚೀನಾ ಭಾರತದ ಗಡಿಯೊಳಗೆ ಪ್ರವೇಶಿಸಲು ನಡೆಸುತ್ತಿರುವ ಯತ್ನಕ್ಕೆ ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ. ಈ ಕುರಿತು ಚರ್ಚೆಯಾಗಬೇಕೆ ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದವು.

ರಾಜ್ಯಗಳಿಗೆ ಆದಾಯ ಹಂಚಿಕೆಯಲ್ಲಿ ತಾರತಮ್ಯ, ಹಣದುಬ್ಬರ, ನಿರುದ್ಯೋಗ ವಿಚಾರಗಳನ್ನು ಪ್ರಸ್ತಾಪಿಸುವ ಸುಳಿವನ್ನು ಪ್ರಾದೇಶಿಕ ಪಕ್ಷಗಳು ನೀಡಿದವು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ಆಗ್ರಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT