ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಮ್ಯಾನ್ಮಾರ್ ಗಡಿ ಗ್ರಾಮದ ಸ್ಥಿತಿ: ಊರು ಒಂದು, ದೇಶ ಎರಡು!

Last Updated 12 ಜನವರಿ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ನಿದ್ದೆ... ಮ್ಯಾನ್ಮಾರ್‌ನಲ್ಲಿ ಊಟ...; ಭಾರತದಲ್ಲಿ ನಿದ್ದೆ ಮುಗಿಸಿ ಎದ್ದು, ಊಟಕ್ಕೆಂದು ಮ್ಯಾನ್ಮಾರ್‌ಗೆ ತಲುಪಲು ಹಿಡಿಯುವ ಸಮಯ ಅರೆ ಗಳಿಗೆ ಮಾತ್ರ. ಮನೆಯ ಬೆಡ್‌ರೂಮ್‌ಗೆ ಹೋದರೆ ಸಾಕು, ಉಭಯ ದೇಶಗಳ ಗಡಿಯನ್ನು ದಾಟಿದಂತೆಯೇ.

ನಾಗಾಲ್ಯಾಂಡ್‌ನ ಲೊಂಗ್ವಾ ಗ್ರಾಮದ ಸ್ಥಿತಿ ಇದು. ಎರಡೂ ದೇಶಗಳ ನಡುವಿನ ಗಡಿಯಲ್ಲಿ ಈ ಲೊಂಗ್ವಾ ಗ್ರಾಮವಿದೆ. ಈ ಗ್ರಾಮದ ನಾಯಕ ಹಾಗೂ ಕೊನ್ಯಾಕ್ ನಾಗಾ ಬುಡಕಟ್ಟು ಸಮುದಾಯದ ಮುಖ್ಯಸ್ಥನ ಮನೆಯ ಮೇಲೆಯೇ ಗಡಿರೇಖೆ ಹಾದುಹೋಗಿದೆ. ನಾಯಕನ ಮನೆಯು ಸರಿಯಾಗಿ ಅರ್ಧಭಾಗ ಭಾರತಕ್ಕೂ, ಇನ್ನರ್ಧ ಭಾಗ ಮ್ಯಾನ್ಮಾರ್‌ಗೂ ಸೇರಿದೆ. ಕಂಬದ ಒಂದು ಬದಿಯಲ್ಲಿ ಹಿಂದಿ ಭಾಷೆಯಲ್ಲೂ, ಮತ್ತೊಂದು ಬದಿಯಲ್ಲಿ ಬರ್ಮಾ ಭಾಷೆಯ ಬರಹ ಇಲ್ಲಿ ಕಂಡುಬರುತ್ತದೆ.

1970ರಲ್ಲಿ ಎರಡೂ ದೇಶಗಳ ಗಡಿಯನ್ನು ಗುರುತಿಸುವ ವೇಳೆಗಾಗಲೇ ಈ ಹಳ್ಳಿ ಅಸ್ತಿತ್ವದಲ್ಲಿತ್ತು. ಪ್ರಮುಖ ಬುಡುಕಟ್ಟುಗಳಲ್ಲಿ ಒಂದಾಗಿರುವ ಕೊನ್ಯಾಕ್‌ ನಾಗಾ ಬುಡಕಟ್ಟಿನ ಜನರನ್ನು ಗಡಿ ವಿಚಾರದಲ್ಲಿ ಪ್ರತ್ಯೇಕಿಸುವುದು ಬೇಡ ಎಂಬ ಕಾರಣಕ್ಕೆ ಅಧಿಕಾರಿಗಳು ಹೀಗೆ ಮಾಡಿದ್ದರು ಎಂದು ‘ಬಿಬಿಸಿ’ ವರದಿ ಮಾಡಿದೆ.

ಇಲ್ಲಿನ ಗ್ರಾಮಸ್ಥರು ಎರಡೂ ದೇಶಗಳ ಪೌರತ್ವ ಪಡೆದಿದ್ದಾರೆ. ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಅತಿದೊಡ್ಡ ಗ್ರಾಮವಾಗಿರುವ ಲೊಂಗ್ವಾದ ಒಂದು ಬದಿಯಲ್ಲಿ ಮ್ಯಾನ್ಮಾರ್‌ನ ದಟ್ಟ ಕಾಡಿದ್ದರೆ, ಮತ್ತೊಂದು ಭಾಗದಲ್ಲಿ ಭಾರತದ ಹಚ್ಚ ಹಸಿರಿನ ಕೃಷಿಭೂಮಿಯಿದೆ. ಈ ಹಳ್ಳಿಯ ಮೂಲಕ ನಾಲ್ಕು ನದಿಗಳು ಹರಿಯುತ್ತವೆ. ಎರಡು ಭಾರತದಲ್ಲಿ, ಇನ್ನೆರಡು ಮ್ಯಾನ್ಮಾರ್‌ನಲ್ಲಿ ಎನ್ನುವುದು ಇನ್ನೊಂದು ವಿಶೇಷ. ಇಲ್ಲಿನ ಗ್ರಾಮಸ್ಥರು ಎರಡೂ ದೇಶಗಳಿಗೆ ಸಂಬಂಧಿಸಿದವರು ಎಂದು ಮೊನ್ ಜಿಲ್ಲೆಯ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಸಮುದಾಯದ ಮುಖ್ಯಸ್ಥನಿಗೆ ಈ ಗ್ರಾಮ ಮಾತ್ರವಲ್ಲದೇ ಸುತ್ತಲ 74 ಹಳ್ಳಿಗಳಲ್ಲಿ ಅತ್ಯಂತ ಗೌರವದ ಸ್ಥಾನವಿದೆ. ಈ ಪೈಕಿ ಕೆಲವು ಹಳ್ಳಿಗಳು ಮ್ಯಾನ್ಮಾರ್‌ನಲ್ಲೂ, ಕೆಲವು ಅರುಣಾಚಲ ಪ್ರದೇಶದಲ್ಲೂ ಹರಡಿವೆ. ಸರ್ಕಾರ ಹಾಗೂ ಗ್ರಾಮಸ್ಥರ ಮಧ್ಯೆ ಸಂಪರ್ಕ ಬೆಸೆಯುವ ವ್ಯಕ್ತಿ ಈತನೇ.

ತಲೆ ಕತ್ತರಿಸಿದರೆ ಬಹುಮಾನ!
ಕೊನ್ಯಾಕ್ ನಾಗಾ ಬುಡಕಟ್ಟಿನ ಹಿಂದೆ ಕರಾಳ ಚರಿತ್ರೆಯಿದೆ. ಈ ಸಮುದಾಯದ ಹಿಂದಿನ ತಲೆಮಾರಿನ ಜನರು, ಮತ್ತೊಂದು ಬುಡಕಟ್ಟಿನ ಜನರ ಜೊತೆ ಜೊತೆ ಕಾದಾಟ ನಡೆಸಬೇಕಿತ್ತು. ಕಾದಾಟದಲ್ಲಿ ಶತ್ರು ಪಾಳಯದ ವ್ಯಕ್ತಿಯ ತಲೆಯನ್ನು ಕಡಿಯಲಾಗುತ್ತಿತ್ತು. ಕತ್ತರಿಸಿದ ತಲೆಗಳನ್ನು ತಂದುಕೊಟ್ಟು ನಾಯಕನಿಂದ ಬಹುಮಾನ ಪಡೆಯುವ ಪದ್ಧತಿ ರೂಢಿಯಲ್ಲಿತ್ತು. ಆದರೆ 1960ರ ಬಳಿಕ ಈ ಆಚರಣೆ ನಿಂತಿದೆ.

ತಲೆ ಕತ್ತರಿಸಿ ತಂದವನ ದೇಹದ ಮೇಲೆ ಹಚ್ಚೆ ಹಾಕುವ ಸಂಪ್ರದಾಯವೂ ಇತ್ತು. ಅಲ್ಲದೇ, ಪ್ರತಿ ಬುಡಕಟ್ಟಿನ ಜನರನ್ನು ಗುರುತಿಸಲೂ ಹಚ್ಚೆ ಹಾಕಲಾಗುತ್ತಿತ್ತು ಎಂದು ಈ ಬಗ್ಗೆ ಅಧ್ಯಯನ ನಡೆಸಿದ್ದ ಅಮೆರಿಕದ ಲೇಖಕ ಲಾರ್ಸ್ ಕೃಟಕ್ ಅವರು ಹೇಳುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಚ್ಚೆ ಪದ್ಧತಿ ಇಲ್ಲ ಎಂದು ಬುಡಕಟ್ಟು ಸಮುದಾಯದ 75 ವರ್ಷ ವಯಸ್ಸಿನ ಹೌನ್ ಎನ್‌ಗೊ ಕಾವ್ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT