ಭಾನುವಾರ, ಮೇ 29, 2022
23 °C

ಪತಿಯಿಂದ ದೂರವಾದ ಮಹಿಳೆಗೆ ಹೆಗಲ ಮೇಲೆ ವ್ಯಕ್ತಿಯನ್ನು ಹೊತ್ತು ಸಾಗುವ ಶಿಕ್ಷೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಭೋಪಾಲ್: ಶಿಕ್ಷೆಯಾಗಿ ಬುಡಕಟ್ಟು ಮಹಿಳೆಯೊಬ್ಬಳು ತನ್ನ ಗಂಡನ ಕುಟುಂಬದ ಸದಸ್ಯನನ್ನು ಹೆಗಲ ಮೇಲೆ ಹೊತ್ತುಕೊಂಡು ಮೂರು ಕಿಲೋಮೀಟರ್ ನಡೆದು ಹೋಗಿರುವ ಅನಾಗರಿಕ ಮತ್ತು ಅಮಾನವೀಯ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ವಿಡಿಯೊವನ್ನು ಆನ್‌ಲೈನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಕೋಲುಗಳು ಮತ್ತು ಕ್ರಿಕೆಟ್ ಬ್ಯಾಟ್ಸ್‌ಗಳನ್ನು ಹಿಡಿದುಕೊಂಡು ಸುತ್ತುವರಿದಿರುವ ಹಳ್ಳಿಗರ ಜೊತೆಯಲ್ಲಿ ಮಹಿಳೆಯು ವ್ಯಕ್ತಿಯೊಬ್ಬನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸುತ್ತಿರುವುದು ಕಂಡುಬರುತ್ತದೆ. ಕೆಲವರು ಅವಳಿಗಾಗುತ್ತಿರುವ ಅವಮಾನವನ್ನು ನೋಡಿ ನಗುವುದು ಮತ್ತು ಆನಂದಿಸುತ್ತಿರುತ್ತಾರೆ. ಆಕೆ ನಡೆಯುವುದು ನಿಧಾನವಾದಾಗ ಕೆಲವರು ಆಕೆಗೆ ಕೋಲುಗಳು ಮತ್ತು ಬ್ಯಾಟುಗಳಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಗುನಾ ಜಿಲ್ಲೆಯ ಸಗೈ ಮತ್ತು ಬಾನ್ಸ್ ಖೇಡಿ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಪ್ರಕಾರ, ಪರಸ್ಪರ ಒಪ್ಪಿಗೆಯಿಂದ ತನ್ನ ಗಂಡನಿಂದ ಆಕೆ ಬೇರ್ಪಟ್ಟಿದ್ದಳು ಮತ್ತು ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ಆದರೆ, ಕಳೆದ ವಾರ ಆಕೆಯ ಮಾಜಿ ಪತಿಯ ಕುಟುಂಬ ಸದಸ್ಯರು ಮತ್ತು ಆ ಹಳ್ಳಿಯ ಇತರರು ಆಕೆಯ ಮನೆಗೆ ಬಂದು ಆಕೆಯನ್ನು ಅಪಹರಿಸಿ ಮತ್ತು ತನ್ನ ಮೇಲೆ ಅವಮಾನಕರ ಶಿಕ್ಷೆಯನ್ನು ಹೇರಿದರು ಎಂದು ತಿಳಿಸಿದ್ದಾಳೆ.

ಮಧ್ಯಪ್ರದೇಶದಿಂದ ಇಂತಹ ಅಮಾನವೀಯ ಘಟನೆ ವರದಿಯಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಜಬುವಾ ಜಿಲ್ಲೆಯಿಂದ ಲಭ್ಯವಾದ ವಿಡಿಯೊವೊಂದರಲ್ಲಿ, ಗ್ರಾಮಸ್ಥರಿಂದ ಗೇಲಿ ಮತ್ತು ಕಿರುಕುಳ ನೀಡುತ್ತಿರುವಾಗ ಮಹಿಳೆಯು ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು