ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾರಾಷ್ಟ್ರ ವಿರೋಧಿ’: ಬೊಮ್ಮಾಯಿ ನಿಲುವಿಗೆ ಎನ್‌ಸಿಪಿ ಆಕ್ಷೇಪ

ಗಡಿಭಾಗದ ಗ್ರಾಮಗಳಿಗೆ ಆರೋಗ್ಯ ವಿಮೆ ಘೋಷಿಸಿದರೆ ಏನು ಸಮಸ್ಯೆ– ಜಯಂತ್ ಪಾಟೀಲ್ ಪ್ರಶ್ನೆ
Last Updated 17 ಮಾರ್ಚ್ 2023, 11:10 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಮಹಾರಾಷ್ಟ್ರ ವಿರೋಧಿ’ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರವು ಇದನ್ನು ಗಮನಿಸಬೇಕು ಎಂದು ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೋರಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಜಯಂತ್ ಪಾಟೀಲ್, ‘ಕರ್ನಾಟಕದ ಗಡಿಭಾಗಗಳಲ್ಲಿ ಮರಾಠಿ ಮಾತನಾಡುವ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರವು ಈಚೆಗೆ ಜ್ಯೋತಿಬಾ ಫುಲೆ ಜನ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಇದನ್ನೇ ಗುರಿಯಾಗಿಸಿಕೊಂಡು ಬೊಮ್ಮಾಯಿ ಮಹಾರಾಷ್ಟ್ರ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ’ ಎಂದು ಆರೋಪಿಸಿದರು.

‘865 ಗ್ರಾಮಗಳ ಜನಸಾಮಾನ್ಯರಿಗೆ ಆರೋಗ್ಯ ವಿಮಾ ಯೋಜನೆ ಸೌಲಭ್ಯ ಕಲ್ಪಿಸಿದರೆ ಕರ್ನಾಟಕಕ್ಕೆ ಏನು ಸಮಸ್ಯೆ? ಬೊಮ್ಮಾಯಿ ಅವರು ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ‘ಕ್ಷಮಿಸಲಾಗದ ಅಪರಾಧ’ ಎಂದು ಕರೆದಿದ್ದಾರೆ. ಆದರೆ, ಅವರೇ (ಬೊಮ್ಮಾಯಿ) ಫಂಡರಾಪುರ ಮತ್ತು ತುಳಜಾಪುರ ದೇವಸ್ಥಾನದ ಟ್ರಸ್ಟ್‌ಗಳಿಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ’ ಎಂದು ಜಯಂತ್ ಹೇಳಿದರು.

‘ಕರ್ನಾಟಕದ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆ ಜಾರಿ ಮಾಡುವುದಾಗಿ ಮಹಾರಾಷ್ಟ್ರ ಸಂಪುಟ ನಿರ್ಣಯ ತೆಗೆದುಕೊಂಡು ಪ್ರಕಟಿಸಿರುವುದು ಅಕ್ಷಮ್ಯ ಅಪರಾಧ. ಮಹಾರಾಷ್ಟ್ರ ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಕ ಗ್ರಾಮಗಳ ಮೇಲೆ ಮಹಾರಾಷ್ಟ್ರವು ಈ ಹಿಂದೆ ಹಕ್ಕು ಸಾಧಿಸಲು ಯತ್ನಿಸಿತ್ತು. ಆಗ ಈ ವಿಷಯ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯರಾಜ್ಯಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮುಂದಾಗಿದ್ದರು. ಆಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಶಾ ಅವರು, ‘ಸುಪ್ರೀಂಕೋರ್ಟ್‌ ಆದೇಶ ಬರುವವರೆಗೆ ಕಾಯಬೇಕು’ ಎಂದು ಹೇಳಿದ್ದರು.

ಅಲ್ಲಿಯವರೆಗೆ ಯಾವುದೇ ರೀತಿಯ ಪ್ರಚೋದನೆಗಳನ್ನು ಮಾಡಬಾರದು ಎಂಬ ಒಪ್ಪಂದಕ್ಕೆ ಎರಡೂ ರಾಜ್ಯಗಳೂ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT