ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಮಳೆ: ಗ್ರಾಮಗಳು ಜಲಾವೃತ, ಎನ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯಾಚರಣೆ

Last Updated 22 ಜುಲೈ 2021, 7:08 IST
ಅಕ್ಷರ ಗಾತ್ರ

ಠಾಣೆ/ಪಾಲ್ಘರ್‌: ‘ಮುಂಬೈಗೆ ಹೊಂದಿಕೊಂಡಿರುವ ಠಾಣೆ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.

ರೈಲ್ವೆ ಹಳಿಗಳ ಮೇಲೆ ಬಂಡೆ ಉರುಳಿದ್ದರಿಂದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಗ್ರಾಮಗಳು ಜಲಾವೃತವಾಗಿವೆ. ಎನ್‌ಡಿಆರ್‌ಎಫ್‌ ತಂಡಗಳು ಇಲ್ಲಿ ಸಿಲುಕಿದ್ದ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಸಾರ ಬಳಿಯ ಉಂಬ್ರೇಲಿ ನಿಲ್ದಾಣದಲ್ಲಿನ ಪ್ಲ್ಯಾಟ್‌ಫಾರ್ಮ್‌ವರೆಗೆ ನೀರು ತುಂಬಿಕೊಂಡಿದೆ. ಘಾಟ್‌ ಬಳಿಯ ರೈಲ್ವೆ ಹಳಿಗಳ ಮೇಲೆ ಬಂಡೆಗಳು ಉರುಳಿವೆ. ಇದರಿಂದಾಗಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದರು.

‘ಠಾಣೆಯ ಸಹಪುರ ತಾಲ್ಲೂಕಿನ ಸಪ್‌ಗಾಂವ್‌ನಲ್ಲಿ ಭಾರಿ ಮಳೆಯಿಂದಾಗಿ ಸೇತುವೆಯೊಂದು ಹಾನಿಗೊಳಗಾಗಿದೆ. ಸದ್ಯ ಇಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ತಹಶೀಲ್ದಾರ್ (ಕಂದಾಯ ಅಧಿಕಾರಿ) ನೀಲಿಮಾ ಸೂರ್ಯವಂಶಿ ಮಾಹಿತಿ ನೀಡಿದರು.

ಸಹಪುರದ ಮೋದಕ್‌ ಸಾಗರ ಅಣೆಕಟ್ಟು ಬೆಳಿಗ್ಗೆ 3.24ರ ಸುಮಾರಿಗೆ ಉಕ್ಕಿ ಹರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಎರಡು ದ್ವಾರಗಳನ್ನು ತೆರೆಯಲಾಗಿದೆ. ಈ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ನೀರು ನುಗ್ಗಿದೆ. ಇಲ್ಲಿ ಸಿಲುಕಿದ್ದ ನೂರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

‘ಭಟಾಸೈ ಗ್ರಾಮದಲ್ಲಿ ಸಿಲುಕಿರುವ ಜನರನ್ನು ಸ್ಥಳೀಯ ಶಾಲೆಗೆ ಸ್ಥಳಾಂತರಿಸಲಾಗಿದೆ. ವಶೀದ್‌ ನಗರದ ಹೌಸಿಂಗ್‌ ಕಾಂಪ್ಲೆಕ್ಸ್‌ಗೂ ಪ್ರವಾಹದ ನೀರು ನುಗ್ಗಿದೆ. ಅಲ್ಲಿಂದಲೂ ಜನರನ್ನು ಜಿಲ್ಲಾ ಪರಿಷದ್‌ ಶಾಲೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಚೆರಪುಳಿಯಲ್ಲಿ ಸಿಲುಕಿದ್ದ ಜನರನ್ನು ದೋಣಿಗಳ ಸಹಾಯದಿಂದ ರಕ್ಷಿಸಲಾಗಿದೆ. ಬಿವಾಂಡಿ ತಾಲ್ಲೂಕಿನ ಪದ್ಘಾ, ಕವಾಡ್, ಗಣೇಶನಗರ ಮತ್ತು ಖಾರೈಪಾದ ಪ್ರದೇಶಗಳು ಜಲಾವೃತ್ತಗೊಂಡಿದ್ದು, ಎನ್‌ಡಿಆರ್‌ಎಫ್‌ ಮತ್ತು ಠಾಣೆಯ ವಿಪತ್ತು ಪ್ರತಿಕ್ರಿಯೆ ಪಡೆಗಳ ಸಹಾಯದಿಂದ ಜನರನ್ನು ಅಲ್ಲಿಂದ ರಕ್ಷಿಸಲಾಗಿದೆ’ ಎಂದು ಅಲ್ಲಿನ ತಹಶೀಲ್ದಾರ್ ಆದಿಕ್ ಪಾಟೀಲ್ ತಿಳಿಸಿದರು.

‘ಬದ್ಲಾಪುರದ ಆಶ್ರಮವೊಂದರಲ್ಲಿ ಸಿಲುಕಿದ್ದ 10 ಮಂದಿ ಮತ್ತು 70 ಪ್ರಾಣಿಗಳನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ನಗರದಲ್ಲಿ 34 ಮರಗಳು ಧರೆಗುರುಳಿವೆ. ಈ ವೇಳೆ ಯಾರೊಬ್ಬರಿಗೂ ಗಾಯಗಳಾಗಿಲ್ಲ’ ಎಂದು ಠಾಣೆಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್‌ ಕದಂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT