ಶನಿವಾರ, ಜನವರಿ 28, 2023
19 °C
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: ಶಿವಸೇನಾ ಸಂಸದ ಸಂಜಯ್‌ ರಾವುತ್‌ ಆಗ್ರಹ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಸಂಜಯ್‌ ರಾವುತ್‌ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ಬಿಕ್ಕಟ್ಟು ಉಲ್ಬಣಿಸಿರುವ ಬೆನ್ನಲ್ಲೇ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಒತ್ತಾಯಿಸಿದ್ದಾರೆ. 

ಮಾಧ್ಯಮದವರ ಜೊತೆ ಬುಧವಾರ ಮಾತನಾಡಿದ ಅವರು, ‘ಬೆಳಗಾವಿಯ ಜೊತೆಗೆ ಕರ್ನಾಟಕ–ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಂತಿರುವ ಮರಾಠಿ ಭಾಷಿಕರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ದಮ್ಮಿದ್ದರೆ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸುವಂತೆ ಒತ್ತಾಯಿಸಲಿ’ ಎಂದು ಸವಾಲು ಹಾಕಿದ್ದಾರೆ.

‘ಕ್ರಾಂತಿ ಸೃಷ್ಟಿಸಿರುವುದಾಗಿ ಮುಖ್ಯಮಂತ್ರಿ ಶಿಂದೆ ಹೇಳುತ್ತಿದ್ದಾರೆ. ಸರ್ಕಾರವು ಬೆಳಗಾವಿಯಲ್ಲಿ ನಡೆಯುತ್ತಿರುವ ದಾಳಿಗಳಿಗೆ ಪ್ರತಿರೋಧ ಒಡ್ಡಲು ಆಗದಷ್ಟು ಅಸಮರ್ಥವಾಗಿರುವುದನ್ನು ನೋಡಿದರೆ ಅದು ಯಾವ ಬಗೆಯ ಕ್ರಾಂತಿ ಎಂಬುದು ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಆತ್ಮಾಭಿಮಾನದ ಕಾರಣ ನೀಡಿ ಶಿವಸೇನಾ ತೊರೆದವರು ಈಗ ಮೌನವಾಗಿದ್ದಾರೆ. ಕೆಲ ಯೋಜನೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವ ಮೂಲಕ ಮಹಾರಾಷ್ಟ್ರವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎಲ್ಲಿದ್ದಾರೆ? ಅವರ ಬಾಯಿಗೆ ಬೀಗ ಹಾಕಲಾಗಿದೆಯೇ?’ ಎಂದು ಹರಿಹಾಯ್ದಿದ್ದಾರೆ.

‘ಸೊಲ್ಲಾಪುರ ಹಾಗೂ ಸಾಂಗ್ಲಿಯ ಹಳ್ಳಿಗಳು ತಮಗೆ ಸೇರಬೇಕೆಂದು ಕರ್ನಾಟಕದ ಯಾವ ಮುಖ್ಯಮಂತ್ರಿಯೂ ಹೇಳಿರಲಿಲ್ಲ. ಸಚಿವರಾದ ಚಂದ್ರಕಾಂತ್‌ ಪಾಟೀಲ್‌ ಹಾಗೂ ಶಂಭುರಾಜ್‌ ದೇಸಾಯಿ ಅವರು ದಾಳಿಗೆ ಬೆದರಿ ಬೆಳಗಾವಿ ಭೇಟಿಯಿಂದ ಹಿಂದೆ ಸರಿದಿದ್ದಾರೆ. ಅವರಿಗೆ ನಾವು ರಕ್ಷಣೆ ನೀಡುತ್ತೇವೆ. ಅವರೊಂದಿಗೆ ಬೆಳಗಾವಿಗೆ ಹೋಗಲು ನಾವು ಸಿದ್ಧರಿದ್ದೇವೆ’ ಎಂದಿದ್ದಾರೆ. 

ಕೇಂದ್ರ ಸರ್ಕಾರದ ಕುಮ್ಮಕ್ಕಿಲ್ಲದೆ ಬೆಳಗಾವಿಯಲ್ಲಿ ಮರಾಠಿಗರು ಹಾಗೂ ಮಹಾರಾಷ್ಟ್ರದ ವಾಹನಗಳ ಮೇಲೆ ದಾಳಿ ನಡೆಸುವುದು ಅಸಾಧ್ಯ–ಸಂಜಯ್‌ ರಾವುತ್‌, ಸಂಸದ

ಸಮಾಜಘಾತುಕ ಶಕ್ತಿಗಳು ನಡೆಸುತ್ತಿರುವ ಹಿಂಸಾ ಕೃತ್ಯಗಳಿಗೆ ಸರ್ಕಾರ ಹೇಗೆ ಹೊಣೆಯಾಗುತ್ತದೆ. ರಾವುತ್‌ ಅವರು ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ–ಚಂದ್ರಶೇಖರ್‌ ಬಾವನ್‌ಕುಳೆ, ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ

ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರ ನಡುವಣ ಬಾಂಧವ್ಯ ಗಟ್ಟಿಯಾಗಿದೆ. ಜನ ಉಭಯ ರಾಜ್ಯಗಳಲ್ಲೂ ಮನೆ ದೇವರುಗಳನ್ನು ಹೊಂದಿದ್ದಾರೆ. ಹೀಗಾಗಿ ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳಬೇಕು–ರಾಜ್‌ ಠಾಕ್ರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ

ಅಮಿತ್‌ ಶಾಗೆ ಮಾಹಿತಿ ನೀಡಿದ ಫಡಣವೀಸ್‌

ಮುಂಬೈ: ‘ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತನಾಡಿದ್ದು, ಗಡಿ ವಿವಾದದ ಹಿನ್ನೆಲೆಯಲ್ಲಿ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ’ ಎಂದು ಫಡಣವೀಸ್‌ ಅವರ ಕಾರ್ಯಾಲಯ ತಿಳಿಸಿದೆ.

‘ಗಡಿ ವಿವಾದದ ವಿಚಾರದಲ್ಲಿ ಮಹಾರಾಷ್ಟ್ರದ ನಿಲುವು ಏನು ಎಂಬುದನ್ನು ಫಡಣವೀಸ್ ಅವರು ಶಾ ಅವರಿಗೆ ವಿವರಿಸಿದ್ದಾರೆ’ ಎಂದೂ ಹೇಳಿದೆ.

‘ಮುಂದಿನ ವರ್ಷ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಕರ್ನಾಟಕದ ಕೆಲವರು ಉದ್ದೇಶಪೂರ್ವಕವಾಗಿಯೇ ಗಡಿ ವಿವಾದ ಕೆದಕುತ್ತಿದ್ದಾರೆ. ಜನರ ಭಾವನೆ ಕೆರಳಿಸುತ್ತಿರುವವರನ್ನು ಮಹಾರಾಷ್ಟ್ರ ಸರ್ಕಾರ ಪತ್ತೆಹಚ್ಚಬೇಕು. ಕರ್ನಾಟಕದ ಮುಖ್ಯಮಂತ್ರಿ ಪ್ರಚೋದನಾಕಾರಿ ಹೇಳಿಕೆ ನೀಡಬಾರದು’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್‌ ಠಾಕ್ರೆ ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕ್‌ ಫಲಕಕ್ಕೆ ಮಸಿ

ನಾಸಿಕ್‌: ಸ್ವರಾಜ್ಯ ಸಂಘಟನೆಯ ಕಾರ್ಯಕರ್ತರು ನಾಸಿಕ್‌ನಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಫಲಕಕ್ಕೆ ಬುಧವಾರ ಮಸಿ ಬಳಿದಿದ್ದಾರೆ.

ಬ್ಯಾಂಕ್ ಕಟ್ಟಡದ ಷಟರ್‌ ಮೇಲೆ ‘ಜೈ ಮಹಾರಾಷ್ಟ್ರ’ ಎಂದೂ ಬರೆದಿದ್ದು, ಕರ್ನಾಟಕದ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು