ಭಾನುವಾರ, ಆಗಸ್ಟ್ 14, 2022
26 °C
ಅತಿಯಾದ ಆತ್ಮವಿಶ್ವಾಸವೇ ಪರಿಷತ್‌ ಚುನಾವಣೆಯಲ್ಲಿ ಸೋಲಿಗೆ ಕಾರಣ

ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಜೆಪಿ: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಅತಿಯಾದ ಆತ್ಮವಿಶ್ವಾಸ ಹೊಂದಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರ ವಿಧಾನಪರಿಷತ್‌ಗೆ ನಡೆದ ಚುನಾವಣೆಯ ಫಲಿತಾಂಶವು ಇದಕ್ಕೆ ಸಾಕ್ಷಿ’ ಎಂದು ಶಿವಸೇನಾ ಶನಿವಾರ ಬಿಜೆಪಿ ಕಾಲೆಳೆದಿದೆ. 

ವಿಧಾನಪರಿಷತ್‌ಗೆ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಲ್ಲಿ ಶಿವಸೇನಾ–ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟವು ಗೆದ್ದಿದೆ. ಇದು ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅಧಿಕಾರ ಪೂರ್ಣಗೊಳಿಸಿರುವ ಮಹಾವಿಕಾಸ ಅಘಾಡಿ(ಎಂವಿಎ) ಮೈತ್ರಿಕೂಟದ ಬಲವನ್ನು ಹೆಚ್ಚಿಸಿದೆ. ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ನಾಗಪುರದಲ್ಲೇ ಬಿಜೆಪಿ ಅಭ್ಯರ್ಥಿ ಸೋತಿರುವುದು, ಬಿಜೆಪಿಗೆ ಆಘಾತ ಉಂಟುಮಾಡಿದೆ. ಇಲ್ಲಿನ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಅಭಿಜಿತ್‌ ವಂಜಾರಿ ಅವರು ಬಿಜೆಪಿಯ ಸಂದೀಪ್‌ ಜೋಶಿ ಅವರನ್ನು ಸೋಲಿಸಿದ್ದಾರೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಸಂಪಾದಕೀಯ ಪ್ರಕಟವಾಗಿದ್ದು, ‘ಐದು ದಶಕಗಳಿಂದಲೂ ಬಿಜೆಪಿ ಭದ್ರಕೋಟೆಯಾಗಿದ್ದ ನಾಗಪುರದಲ್ಲೇ ವಿರೋಧಪಕ್ಷವಾದ ಬಿಜೆಪಿ ಸೋತಿರುವುದು ಅದಕ್ಕೆ ಆಘಾತ ತಂದಿದೆ. ನಾಗಪುರ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಸೋತು, ಕಡಿಮೆ ಅಂತರದಿಂದ ಮೂರು ಕ್ಷೇತ್ರಗಳಲ್ಲಿ ಗೆದ್ದಿತ್ತು. ಅಂದೇ ಬಿಜೆಪಿಯ ಪತನ ಪ್ರಾರಂಭವಾಗಿತ್ತು. ಇದೀಗ ಪೂರ್ಣ ನೆಲೆಯನ್ನೇ ಕಳೆದುಕೊಂಡಿದೆ’ ಎಂದು ಉಲ್ಲೇಖಿಸಲಾಗಿದೆ.

‘ಕೇಂದ್ರ ಸಚಿವ ನಿತಿನ್‌ ಗಡ್ಕರಿ, ನಾಗಪುರ ಪದವೀಧರರ ಕ್ಷೇತ್ರವನ್ನು 25 ವರ್ಷ ಪ್ರತಿನಿಧಿಸಿದ್ದರು. ಅವರಿಗಿಂತಲೂ ಮುಂಚಿತವಾಗಿ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರ ತಂದೆ ಗಂಗಾಧರ್‌ ಫಡಣವೀಸ್‌ ಅವರು ಈ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಬಿಜೆಪಿ ಭದ್ರಕೋಟೆ ಪತನವಾಗಿದೆ. ಈ ಫಲಿತಾಂಶವು ಆಶ್ಚರ್ಯವೇನಲ್ಲ. ಏಕೆಂದರೆ ಬಿಜೆಪಿ ಪತನವು ಕಳೆದ ವಿಧಾನಸಭೆ ಚುನಾವಣೆಯಲ್ಲೇ ಪ್ರಾರಂಭವಾಗಿತ್ತು. ಇಲ್ಲಿ ಬಿಜೆಪಿ ಗಡ್ಕರಿ ಹಾಗೂ ಫಡಣವೀಸ್‌ ಗುಂಪಾಗಿ ಬದಲಾಗಿದೆ. ಇಲ್ಲಿ ಗಡ್ಕರಿ ಅವರ ಪರವಾಗಿರುವ ವಿಧಾನ ಪರಿಷತ್‌ ಸದಸ್ಯ ಅನಿಲ್‌ ಸೊಲೆ ಅವರಿಗೆ ಫಡಣವೀಸ್‌ ಟಿಕೆಟ್‌ ನಿರಾಕರಿಸಿದ್ದರು’ ಎಂದು ಉಲ್ಲೇಖಿಸಲಾಗಿದೆ.

‘ಪುಣೆ ಪದವೀಧರರ ಕ್ಷೇತ್ರವೂ ಬಿಜೆಪಿ ಭದ್ರನೆಲೆ ಆಗಿತ್ತು. ಈ ಕ್ಷೇತ್ರವನ್ನು ಈ ಹಿಂದೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಪ್ರತಿನಿಧಿಸುತ್ತಿದ್ದರು. ಈ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಸೋತಿದೆ. ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಯಾರ ಸಹಾಯವೂ ಇಲ್ಲದೇ ಚುನಾವಣೆ ಗೆಲ್ಲಬಹುದು ಎಂದು ಅಂದುಕೊಂಡಿತ್ತು. ಎಂವಿಎ ಮೈತ್ರಿಕೂಟವು ಜೊತೆಯಾಗಿ ಈ ಚುನಾವಣೆಯನ್ನು ಎದುರಿಸಿತು. ನಾಗಪುರದಲ್ಲಿ ಕಾಂಗ್ರೆಸ್‌ ಅತೃಪ್ತರೂ ಬಿಜೆಪಿ ಸೋಲಿಸಲು ಜೊತೆಯಾಗಿದ್ದರು’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು