ಮಹಾರಾಷ್ಟ್ರ ನೆರೆ ಸಂತ್ರಸ್ಥರ ನೆರವಿಗಾಗಿ ಸಾಲ ಪಡೆಯಬೇಕಾಗಬಹುದು: ಪವಾರ್

ಮುಂಬೈ: ಮಹಾರಾಷ್ಟ್ರ ’ಆರ್ಥಿಕ ಬಿಕ್ಕಟ್ಟು’ ಎದುರಿಸುತ್ತಿದೆ. ಹೀಗಿರುವಾಗ ನೆರೆ ಸಂತ್ರಸ್ಥರಿಗೆ ಸಹಾಯ ಮಾಡಲು ಸಾಲ ಪಡೆಯುವುದನ್ನು ಬಿಟ್ಟು ರಾಜ್ಯ ಸರ್ಕಾರಕ್ಕೆ ಬೇರೆ ದಾರಿ ಇಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ತಿಳಿಸಿದರು.
ಶರದ್ ಪವಾರ್ ಅವರು ಮರಾಠವಾಡದದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಪ್ರವಾಸವನ್ನು ಕೈಗೊಂಡಿದ್ದಾರೆ. ಈ ವೇಳೆ ಮಾಧ್ಯಮವರಿಗೆ ಪ್ರತಿಕ್ರಿಯಿಸಿದ ಅವರು,‘ ಇಂತಹ ಪರಿಸ್ಥಿತಿಯಲ್ಲಿ ಕೇವಲ ಮಹಾರಾಷ್ಟ್ರ ಸರ್ಕಾರ ಒಂಬಂಟಿಯಾಗಿ ಏನೂ ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ನೆರೆ ಸಂತ್ರಸ್ಥರ ನೆರವಿಗಾಗಿ ಸಾಲ ಪಡೆಯಬೇಕಾಗುತ್ತದೆ. ನಾನು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.
ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪುಣೆ, ಔರಂಗಾಬಾದ್, ಕೊಂಕಣ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, 48ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರದ ತನಕ 40,036 ಜನರನ್ನು ನಾಲ್ಕು ಜಿಲ್ಲೆಗಳ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸೋಲಾಪುರದಿಂದ 32,500 ಮಂದಿ ಪುಣೆಯಿಂದ 6,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಉಸ್ಮಾನಾಬಾದ್, ಲಾತೂರ್, ನಾಂದೇಡ್ ಮತ್ತು ಪಂಡರಾಪುರ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಸೊಯಾಬಿನ್, ಕಬ್ಬು ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.