ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ | ಕೃಷಿ ಕಾಯ್ದೆ ರದ್ದು: ಮಹಾಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ

Last Updated 17 ಅಕ್ಟೋಬರ್ 2020, 17:16 IST
ಅಕ್ಷರ ಗಾತ್ರ

ಪಟ್ನಾ:

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಮಹಾಮೈತ್ರಿಕೂಟ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಭರವಸೆ ನೀಡಿದೆ. ಜೊತೆಗೆ, 10 ಲಕ್ಷ ಉದ್ಯೋಗ ಸೃಷ್ಟಿಸುವ ವಾಗ್ದಾನ ಮಾಡಿದೆ.

‘ಬಿಹಾರ ವಿಧಾನಸಭೆಯ ಮೊದಲ ಅಧಿವೇಶನದಲ್ಲೇ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಮಂಡಿಸಲಾಗುವುದು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಮೇಲೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಕಾರ್ಯಕ್ರಮಕ್ಕೆ ಮೊದಲ ಸಹಿ ಹಾಕುತ್ತೇನೆ’ ಎಂದು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಸರ್ಕಾರಿ ನೇಮಕಾತಿಯಲ್ಲಿ ಪರೀಕ್ಷಾ ಶುಲ್ಕ ಮನ್ನಾ ಮಾಡುವುದಾಗಿ ಭರವಸೆ ನೀಡಿದ ತೇಜಸ್ವಿ, ‘ಅಭ್ಯರ್ಥಿಯು ಯಾವುದೇ ಶುಲ್ಕ ಭರಿಸಬೇಕಾದ ಅಗತ್ಯವಿಲ್ಲ. ಆದರೆ, ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುತ್ತದೆ’ ಎಂದಿದ್ದಾರೆ.

ನಿತೀಶ್ ವಿರುದ್ಧ ಕಿಡಿ: ‘ಅನುಭವದ ಕೊರೆತೆ ಇದೆ’ ಎಂದು ತನ್ನನ್ನು ಟೀಕಿಸಿರುವ ನಿತೀಶ್‌ಗೆ ತಿರುಗೇಟು ನೀಡಿರುವ ಯಾದವ್, ‘ಅನುಭವವು ವಯಸ್ಸಿನಿಂದ ಬರುವುದಿಲ್ಲ. ಉಪಮುಖ್ಯಮಂತ್ರಿಯಾಗಿದ್ದಾಗ ಹಲವು ದೂರದೃಷ್ಟಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ನಿತೀಶ್ ನೇತೃತ್ವದ ಸರ್ಕಾರದಲ್ಲಿ 60ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಜೆಡಿಯು– ಬಿಜೆಪಿ ನೇತೃತ್ವದ ಸರ್ಕಾರವು ಬಿಹಾರದ ಜನರಿಗೆ ದ್ರೋಹ ಬಗೆದಿದೆ’ ಎಂದು ಆರೋಪಿಸಿದ್ದಾರೆ.

‘ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅತ್ತುಕರೆದರೂ ಬೇಡಿಕೆ ಈಡೇರಿಸಿಕೊಳ್ಳಲು ಆಗಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಇದ್ದರೂ ನಿತೀಶ್ ಯತ್ನ ಕೈಗೂಡಲಿಲ್ಲ.ವಿಶೇಷ ಸ್ಥಾನಮಾನವನ್ನು ನೀಡಲು ಅಮೆರಿಕ ಅಧ್ಯಕ್ಷ ಟ್ರಂಪ್ ಇಲ್ಲಿಗೆ ಬರುವುದಿಲ್ಲ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಮೋತಿಹಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವಗೊಳಿಸುವುದಾಗಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿ ಉಳಿದಿದೆ. ಮಹಾಘಟಬಂಧನ ಅಧಿಕಾರಕ್ಕೆ ಬಂದಲ್ಲಿ ಸಕ್ಕರೆ ಕಾರ್ಖಾನೆಗಳ ಪುನರಾರಂಭದ ಜೊತೆಗೆ ಆಹಾರ ಸಂಸ್ಕರಣೆ ಘಟಕಗಳನ್ನು ನಿರ್ಮಿಸುತ್ತೇವೆ’ ಎಂದು ತೇಜಸ್ವಿ ಭರವಸೆ ನೀಡಿದರು.

‘ಪತ್ನಿಯನ್ನು ಸಿ.ಎಂ. ಮಾಡಿದ್ದೇ ಸಾಧನೆ’

ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಅವರ ತ‌ಮ್ಮ ಹೆಂಡತಿಯನ್ನು ಮುಖ್ಯಮಂತ್ರಿ ಮಾಡಿದ್ದು ಬಿಟ್ಟರೆ, ರಾಜ್ಯದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ. ಔರಾಂಗಾಬಾದ್‌ನ ನಾಬಿಗರದಲ್ಲಿ ಅವರು ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದರು.

370 ಪ್ರಸ್ತಾಪ ಯಾಕಿಲ್ಲ?

‘ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಹೇಳಿದ್ದ ಕಾಂಗ್ರೆಸ್, ಪ್ರಣಾಳಿಕೆಯಲ್ಲಿ ಅದನ್ನು ಸೇರಿಸುವ ಧೈರ್ಯವನ್ನು ಏಕೆ ತೋರಿಸಿಲ್ಲ’ ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರತ್ಯೇಕತಾವಾದಿಗಳ ಭಾಷೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. ಬಿಹಾರದಲ್ಲಿ ಮತ ಗಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಸಮಾಜಗಳನ್ನು ಒಡೆಯಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT