ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆಯ ಬಹುಭಾಗವಾಗಿದ್ದರೂ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ: ಪವಾರ್

Last Updated 8 ಅಕ್ಟೋಬರ್ 2022, 14:18 IST
ಅಕ್ಷರ ಗಾತ್ರ

ನಾಗ್ಪುರ: ‘ದೇಶದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ದೊಡ್ಡ ಭಾಗವಾಗಿದ್ದರೂ ಅವರಿಗೆ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂಬ ಭಾವನೆ ಇದೆ’ ಎಂದು ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ‌

ವಿದರ್ಭ ಮುಸ್ಲಿಂ ಬುದ್ಧಿಜೀವಿಗಳ ವೇದಿಕೆ ಶನಿವಾರ ಇಲ್ಲಿ ಆಯೋಜಿಸಿದ್ದ ‘ಭಾರತೀಯ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳು’ ವಿಷಯ ಕುರಿತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಉರ್ದು ಭಾಷೆಯ ಮಹತ್ವವನ್ನು ಹೇಳಿ, ಕೇರಳದ ಉದಾಹರಣೆ ಉಲ್ಲೇಖಿಸಿ ರಾಜ್ಯಗಳಲ್ಲಿರುವ ಮುಖ್ಯ ಭಾಷೆಗಳ ಮಹತ್ವವನ್ನೂ ಒತ್ತಿ ಹೇಳಿದರು.

‘ತಮಗೆ ದಕ್ಕಬೇಕಾದ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಭಾವನೆ ಮುಸ್ಲಿಂ ಸಮುದಾಯದರಿಗೆ ಇದೆ. ಇದು ವಾಸ್ತವವೂ ಹೌದು. ಅವರಿಗೆ ಪ್ರಾತಿನಿಧ್ಯ ಹೇಗೆ ದೊರೆಯಬೇಕೆಂಬ ಬಗ್ಗೆ ಚರ್ಚೆಗಳು ನಡೆಯುವುದು ಅಗತ್ಯ’ ಎಂದರು.

ಈ ಹಿಂದಿನ ಭಾಷಣಕಾರರು ಪ್ರಸ್ತಾಪಿಸಿದ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಉರ್ದು ಭಾಷೆಯ ಬಳಕೆ ಕುರಿತು ಪ್ರತಿಕ್ರಿಯಿಸಿದ ಪವಾರ್, ‘ಉರ್ದು ಭಾಷೆಯೊಂದಿಗೆ ಹಲವಾರು ಜನರು ತಲೆಮಾರುಗಳಿಂದ ಸಂಬಂಧ ಹೊಂದಿದ್ದಾರೆ. ನಾವು ಉರ್ದು ಶಾಲೆಗಳು ಮತ್ತು ಶಿಕ್ಷಣವನ್ನು ಪರಿಗಣಿಸಬೇಕು. ಅದರ ಜತೆಗೇ ಆಯಾ ರಾಜ್ಯದ ಮುಖ್ಯ ಭಾಷೆಯನ್ನೂ ಪರಿಗಣಿಸಬೇಕು’ ಎಂದು ಹೇಳಿದರು.

‘ಕೇರಳದಲ್ಲಿ ಬಹುಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇದ್ದಾರೆ. ಆ ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಹೇಗೆ ಸಾಕ್ಷರರಾಗಿದ್ದಾರೆ, ಅಲ್ಲಿನ ಮುಖ್ಯಭಾಷೆಗೆ ಹೇಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಇದರಿಂದ ಅವರಿಗೆ ಆಗುತ್ತಿರುವ ಪ್ರಯೋಜನಗಳೇನು ಎಂಬ ಬಗ್ಗೆ ಅಧ್ಯಯನ ಮಾಡುವ ಅಗತ್ಯವಿದೆ. ದೇಶದಲ್ಲಿ ಎಲ್ಲ ಸಮುದಾಯಗಳಿಗೂ ನಿರುದ್ಯೋಗವು ಸಮಸ್ಯೆಯಾಗಿದೆ. ಮುಸ್ಲಿಮರಿಗೆ ಬೆಂಬಲ ಮತ್ತು ಸಮಾನ ಅವಕಾಶ ನೀಡಿದರೆ ಅವರು ಉರ್ದು ಭಾಷೆಯ ಮೂಲಕ ಕಲೆ, ಕಾವ್ಯ ಮತ್ತು ಬರವಣಿಗೆ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಬಹುದು’ ಎಂದು ಅಭಿಪ್ರಾಯಪಟ್ಟರು.

‘ಎನ್‌ಸಿಪಿಯು ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿದ್ದು, ಪಕ್ಷದಲ್ಲಿ 8 ಸಂಸದರಲ್ಲಿ ಇಬ್ಬರು ಮುಸ್ಲಿಂ ಸಮುದಾಯದವರಿದ್ದಾರೆ’ ಎಂದೂ ಶರದ್ ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT