ಗುರುವಾರ , ಮೇ 13, 2021
18 °C

ನಾಸಿಕ್ ಆಸ್ಪತ್ರೆ ಆಮ್ಲಜನಕ ಪೂರೈಕೆ ವ್ಯತ್ಯಯ: ಎಫ್‌ಐಆರ್‌ ದಾಖಲು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ‌): ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 24 ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಅಪರಿಚತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ನಾಸಿಕ್ ನಗರದ ಭದ್ರಕಾಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304–ಎ ಅಡಿಯಲ್ಲಿ (ನಿರ್ಲಕ್ಷ್ಯದಿಂದ ಸಾವು ಸಂಭವಿಸಿರುವುದು) ಎಫ್‌ಐಆರ್ ದಾಖಲಿಸಲಾಗಿದೆ.

ಬುಧವಾರ ಮಧ್ಯಾಹ್ನ ಆಮ್ಲಜನಕ ಪೂರೈಕೆಯಲ್ಲಿ ದಿಢೀರನೆ ಉಂಟಾದ ವ್ಯತ್ಯಯದಿಂದ ಇಲ್ಲಿನ ಡಾ. ಝಾಕೀರ್ ಹುಸೇನ್ ಆಸ್ಪತ್ರೆಯಲ್ಲಿ 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದರು.

ವೈದ್ಯಕೀಯ ಆಮ್ಲಜನಕ ಸಂಗ್ರಹಿಸುವ ಘಟಕದಲ್ಲಿ ಸೋರಿಕೆ
ಯಾದ ಕಾರಣ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಈ ಸಾವುಗಳು ಸಂಭವಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.

ಘಟನೆ ನಡೆದಾಗ 150 ಹಾಸಿಗೆಗಳ ಸಾಮರ್ಥ್ಯವಿರುವ ಈ ಆಸ್ಪತ್ರೆಯಲ್ಲಿ 157 ರೋಗಿಗಳು ದಾಖಲಾಗಿದ್ದರು. 

3 ವಾರ ಹಿಂದೆಯಷ್ಟೇ ಕಾರ್ಯಾರಂಭ:  ಆಸ್ಪತ್ರೆಯಲ್ಲಿದ್ದ 13000 ಲೀಟರ್‌ ಸಂಗ್ರಹ ಸಾಮರ್ಥ್ಯದ ಆಮ್ಲಜನಕದ ಘಟಕ 21 ದಿನಗಳ ಹಿಂದೆಯಷ್ಟೇ ಕಾರ್ಯಾರಂಭ ಮಾಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಆಮ್ಲಜನಕದ ಟ್ಯಾಂಕ್‌ ವಡೋದರ ಮೂಲದ ಇನಾಕ್ಸ್‌ಸಿವಿಎ ಕಂಪನಿಗೆ ಸೇರಿದ್ದು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. 

ವಿಮಾನ ಸಂಚಾರ ನಿರ್ಬಂಧ: ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿ ಭಾರತವನ್ನು ‘ಕೆಂಪುಪಟ್ಟಿಗೆ’ ಸೇರಿಸಿದ ಹಿಂದೆಯೇ, ಲಂಡನ್‌ನ ಅತಿದೊಡ್ಡ ವಿಮಾನನಿಲ್ದಾಣ ‘ಹೀಥ್ರೂ’ ಆಡಳಿತ ವರ್ಗವು, ಭಾರತದಿಂದ ಹೆಚ್ಚುವರಿ ವಿಮಾನಗಳ ಆಗಮನಕ್ಕೆ ಅವಕಾಶವನ್ನು ನಿರಾಕರಿಸಿದೆ. ಕೆಂಪುಪಟ್ಟಿಗೆ ಸೇರಿಸಿದ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ.

ನಿಲ್ದಾಣದ ಪಾಸ್‌ಪೋರ್ಟ್ ಕಂಟ್ರೊಲ್ ವಿಭಾಗದಲ್ಲಿ ಈಗಾಗಲೇ ದೊಡ್ಡ ಸಾಲು ಮತ್ತು ಒತ್ತಡ ಇದೆ ಎಂದೂ ಆಡಳಿತವು ಅವಕಾಶ ನಿರಾಕರಣೆಗೆ ಕಾರಣ ನೀಡಿದೆ. ಭಾರತದಲ್ಲಿ ಕಾಣಿಸಿರುವ ಕೊರೊನಾ ಸೋಂಕು ಮಾದರಿಯ 103 ಪ್ರಕರಣ ಪತ್ತೆಯಾದ ನಂತರ ಈ
ವಾರದ ಆರಂಭದಲ್ಲಿ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಲು ಬ್ರಿಟನ್‌ ತೀರ್ಮಾನಿಸಿತ್ತು.

ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮುಂಜಾಗ್ರತೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜನಪ್ರತಿನಿಧಿಗಳ ಸಭೆಗೆ ಗೃಹ ಕಾರ್ಯದರ್ಶಿ ಮ್ಯಾಟ್‌ ಹಾಂಕೊಕ್ ತಿಳಿಸಿದ್ದರು. ಕೆಂಪುಪಟ್ಟಿಗೆ ಸೇರ್ಪಡೆ ಎಂದರೆ ಕಳೆದ 10 ದಿನ ಭಾರತದಲ್ಲಿರುವ ಯು.ಕೆ, ಐರಿಷ್‌ ನಿವಾಸಿಗಳು ಅಥವಾ ಬ್ರಿಟಿಷ್‌ ಪ್ರಜೆ ದೇಶಕ್ಕೆ ಮರಳಲು ಅವಕಾಶವಿಲ್ಲ.

ಕೋವಿಡ್ ಪ್ರಕರಣ ಹಿನ್ನೆಲೆಯಲ್ಲಿ ಭಾರತದಿಂದ ದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಈ ತೀರ್ಮಾನ ಪ್ರಕಟಿಸಿದ್ದು, ಕೋವಿಡ್ ಪ್ರಕರಣ ಹೆಚ್ಚಿದ್ದು, ಭಾರತದಲ್ಲಿ ಹೆಚ್ಚು ಅಪಾಯದ ಸ್ಥಿತಿ ಇದೆ ಎಂದಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಪ್ರಧಾನಿ, ಭಾರತದಿಂದ ಬರುವ ವಿಮಾನಗಳ ಸಂಖ್ಯೆಯನ್ನು ಶೇ 30ರಷ್ಟು ಕಡಿತಗೊಳಿಸಲಾಗುವುದು. ಅಲ್ಲದೆ, ಆಸ್ಟ್ರೇಲಿಯನ್ನರು ಅಧಿಕ ಅಪಾಯವಿರುವ ಭಾರತದಂತಹ ದೇಶಕ್ಕೆ ತೆರಳುವುದರ ಮೇಲೂ ಮಿತಿ ಹೇರಲಿದ್ದೇವೆ ಎಂದರು.

ನ್ಯಾಯಾಂಗ ತನಿಖೆಗೆ ಕೋರಿ ‘ಸುಪ್ರೀಂ’ಗೆ ಪಿಐಎಲ್‌

ನವದೆಹಲಿ: 24 ರೋಗಿಗಳ ಸಾವಿಗೆ ಕಾರಣವಾದ ನಾಸಿಕ್ ಆಸ್ಪತ್ರೆಯಲ್ಲಿನ ಆಮ್ಲಜನಕ ಸೋರಿಕೆ ಪ್ರಕರಣದ ತನಿಖೆಗೆ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲು ನಿರ್ದೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಗುರುವಾರ ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ನ್ಯಾಯಾಂಗ ತನಿಖೆಗೆ ನಿರ್ದೇಶಿಸಬೇಕು ಎಂದು ‘ಸೇವ್‌ ದೆಮ್‌ ಇಂಡಿಯಾ ಫೌಂಡೇಶನ್‌’ ಎಂಬ ಎನ್‌ಜಿಒ ಪಿಐಎಲ್‌ ಸಲ್ಲಿಸಿದೆ.

ಕೇರಳ ಸಿಎಂ ನಿಧಿಗೆ ₹ 22 ಲಕ್ಷ ಸಂದಾಯ

ತಿರುವನಂತಪುರ: ರಾಜ್ಯ ಸರ್ಕಾರ ನೀಡುವ ಉಚಿತ ಲಸಿಕೆಯನ್ನು ತೆಗೆದುಕೊಳ್ಳುವವರು ಲಸಿಕೆಯ ದರದ ಮೊತ್ತವನ್ನು ಕೇರಳ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.

‘#VaccineChallenge’ ಎಂಬ ಹ್ಯಾಷ್‌ಟ್ಯಾಗ್‌ಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಯಾನ ಆರಂಭಗೊಂಡ 24 ಗಂಟೆಗಳಲ್ಲಿ ಮುಖ್ಯಮಂತ್ರಿಗಳ ನಿಧಿಗೆ ₹ 22 ಲಕ್ಷ ದೇಣಿಗೆ ಪಾವತಿಯಾಗಿದೆ.

ಕೇಂದ್ರ ಘೋಷಿಸಿರುವ ಹೊಸ ಲಸಿಕೆ ನೀತಿಯನ್ನು ಪ್ರತಿಭಟಿಸಿ ಹಾಗೂ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಬೆಂಬಲ ಸೂಚಿಸಿ ಬುಧವಾರ ಈ ಅಭಿಯಾನವನ್ನು ಆರಂಭಿಸಲಾಗಿದೆ.

ವಿದೇಶದಿಂದ ಲಸಿಕೆ ಖರೀದಿಗೆ ಮಹಾರಾಷ್ಟ್ರ ಚಿಂತನೆ

ಮುಂಬೈ: ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಲಸಿಕೆ ಪೂರೈಕೆಯಲ್ಲಿಯೂ ಸುಧಾರಣೆ ಕಂಡುಬಂದಿಲ್ಲ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋವಿಡ್‌–19 ಲಸಿಕೆ ಖರೀದಿಗಾಗಿ ಸಮಿತಿಯೊಂದನ್ನು ರಚಿಸಲು ಮಹಾರಾಷ್ಡ್ರ ಸರ್ಕಾರ ಚಿಂತನೆ ನಡೆಸಿದೆ.

18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಗ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಬೇಕಾಗುತ್ತದೆ. ಇದು ಕೂಡ ವಿದೇಶದಲ್ಲಿ ಲಸಿಕೆ ಖರೀದಿಸಲು ಮಹಾರಾಷ್ಟ್ರ ಚಿಂತನೆ ನಡೆಸಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

‘ದೇಶದ ಕಂಪನಿಗಳಲ್ಲಿ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಾಗಲಿ; ಲಭ್ಯವಿರುವ ಕಡೆಯಿಂದ ಲಸಿಕೆ ಖರೀದಿಸುವ ಸಲುವಾಗಿ ಸಮಿತಿ ರಚಿಸಲು
ಸಚಿವ ಸಂಪುಟದಲ್ಲಿ ಚರ್ಚಿಸಿದ್ದೇವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌
ಹೇಳಿದರು.

‘ಮೇ 24ರ ವರೆಗೆ ನೇರವಾಗಿ ರಾಜ್ಯಕ್ಕೆ ಲಸಿಕೆ ಪೂರೈಕೆ ಸಾಧ್ಯವಿಲ್ಲ ಎಂಬುದಾಗಿ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಿಳಿಸಿದೆ’ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು