ಗುರುವಾರ , ಮೇ 6, 2021
31 °C

ಮಹಾರಾಷ್ಟ್ರ: ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ನಾಲ್ವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನಾಗ್ಪುಪುರದ 'ವೆಲ್ ಟ್ರೀಟ್' ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು ಹಲವು ರೋಗಿಗಳು ಗಾಯಗೊಂಡಿದ್ದಾರೆ.

ವಾಡಿ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ 8.30ರ ವೇಳೆ ಅವಘಡ ಸಂಭವಿಸಿದೆ. ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಎರಡು ಡಜನ್‌ಗಿಂತಲೂ ಹೆಚ್ಚು ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ನಾಗ್ಪುರ ಪಾಲಿಕೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯ ನಡೆಸಿದ್ದಾರೆ.

ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ತೀವ್ರ ನಿಗಾ ಘಟಕದ ಎಸಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ಆ ಮಹಡಿಗಷ್ಟೇ ಸೀಮಿತವಾಗಿತ್ತು. ಉಳಿದ ಕಡೆ ಹರಡಿರಲಿಲ್ಲ ಎಂದು ನಾಗ್ಪುರ ನಗರಪಾಲಿಕೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಉಚ್ಕೆ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ವೇಳೆ ಎರಡನೇ ಮಹಡಿಯಲ್ಲಿ 10 ರೋಗಿಗಳಿದ್ದರು. ಈ ಪೈಕಿ ಆರು ಮಂದಿ ಅವರಾಗಿ ಹೊರಬಂದಿದ್ದಾರೆ. ಉಳಿದ ನಾಲ್ವರನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ 'ಕೋವಿಡ್ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ರೋಗಿಗಳು ಮೃತಪಟ್ಟಿರುವುದು ದುಃಖಕರ' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಹಾರಾಷ್ಟ್ರ ಪ್ರತಿಪಕ್ಷನಾಯಕ ದೇವೇಂದ್ರ ಫಡಣವೀಸ್ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು