ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌: ಬಿಡುಗಡೆಯಾದವರಲ್ಲಿ ಬಿಜೆಪಿ ನಾಯಕನ ಬಾವನೂ ಒಬ್ಬ, ನವಾಬ್‌ ಮಲಿಕ್

Last Updated 9 ಅಕ್ಟೋಬರ್ 2021, 11:22 IST
ಅಕ್ಷರ ಗಾತ್ರ

ಮುಂಬೈ: ಇತ್ತೀಚೆಗೆ ಐಶಾರಾಮಿ ಹಡಗಿನ ಮೇಲಿನ ದಾಳಿಯ ವೇಳೆ ಮಾದಕ ವಸ್ತು ನಿಯಂತ್ರಣ(ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದ 11 ಮಂದಿಯಲ್ಲಿ, ಮೂವರನ್ನು ಬಿಡಗಡೆ ಮಾಡಿದ್ದು, ಇವರಲ್ಲಿ ಒಬ್ಬರು ಬಿಜೆಪಿ ನಾಯಕ ಮೋಹಿತ್‌ ಭಾರತೀಯ ಅವರ ಬಾವ(ಸೋದರ ಸಂಬಂಧಿ) ಎಂದು ಎನ್‌ಸಿಪಿ ನಾಯಕ, ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್‌ ಮಲಿಕ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಸಿಬಿ ಬಿಡುಗಡೆ ಮಾಡಿದ ಮೂವರು ವ್ಯಕ್ತಿಗಳಲ್ಲಿ ಮೋಹಿತ್ ಭಾರತೀಯ ಬಾವ ರಿಷಭ್ ಸಚ್‌ದೇವ್‌ ಒಬ್ಬರು. ಇನ್ನಿಬ್ಬರ ಹೆಸರು ಪ್ರತೀಕ್ ಗಬ್ಬಾ ಮತ್ತು ಅಮಿರ್ ಫರ್ನೀಚರ್‌ವಾಲಾ. ಇವರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಕ್ರ್ಯೂಸ್ ಪಾರ್ಟಿಗೆ ಕರೆತಂದಿದ್ದವರು. ಸಚ್‌ದೇವ್‌ ಅವರೊಂದಿಗೆ ಈ ಇಬ್ಬರನ್ನೂ ಎನ್‌ಸಿಬಿಯವರು ಬಂಧಿಸಿದ ಎರಡು ಗಂಟೆಗಳ ನಂತರ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು.

ಮಲಿಕ್ ಅವರ ಆರೋಪದ ಕುರಿತು ಪ್ರತಿಕ್ರಿಯೆಗಾಗಿ ಭಾರತೀಯ ಅವರನ್ನು ಸಂಪರ್ಕಿಸಿದಾಗ, ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರ ಕಚೇರಿಯವರು, ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

‘ಪ್ರತೀಕ್ ಮತ್ತು ಅಮಿರ್ ಅವರ ಹೆಸರುಗಳು ನ್ಯಾಯಾಲಯದ ವಿಚಾರಣೆಯಲ್ಲಿ ಕೇಳಿಬಂದಿದೆ‘ ಎಂದು ಮಲಿಕ್ ಹೇಳಿದರು.

ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 18 ಜನರನ್ನು ಬಂಧಿಸಲಾಗಿದೆ. ಬಿಡುಗಡೆ ಮಾಡಿರುವ ಮೂವರ ಜೊತೆಗೆ ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೇಡೆ ಅವರ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕೆಂದು ಮಲಿಕ್ ಒತ್ತಾಯಿಸಿದರು.

‘ರಿಷಭ್ ಸಚ್‌ದೇವ ಬಂಧನವಾದಾಗ, ಅವರ ತಂದೆ ಮತ್ತು ಚಿಕ್ಕಪ್ಪ(ಅಂಕಲ್‌) ಇಬ್ಬರೂ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ. ಅಂದು ವಾಂಖೆಡೆ, ಮುಂಬೈ, ದೆಹಲಿಯ ಬಿಜೆಪಿ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದಾರೆ. ಇದೆಲ್ಲವೂ ಸಚ್‌ದೇವ್‌ ಅವರ ತಂದೆಯ ದೂರವಾಣಿಯಿಂದಲೇ ನಡೆದಿವೆ‘ ಎಂದು ಅವರು ದೂರಿದ್ದಾರೆ.

ಮಲಿಕ್ ಪ್ರಕಾರ, ಮುಂಬೈ ಪೊಲೀಸರು ಕ್ರೂಸ್‌ ಹಡಗಿನಿಂದ 11 ಮಂದಿಯನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದರು. ಆದರೆ, ‘ಕ್ರೂಸ್‌ ಪಾರ್ಟಿ ಮೇಲೆ ದಾಳಿ ಮಾಡಿದ ವೇಳೆ ಬಂಧಿಸಿದವರಲ್ಲಿ ಈ ಮೂವರ ಫೋನ್‌ಗಳನ್ನು ಏಕೆ ಪೊಲೀಸರು ವಶಪಡಿಸಿಕೊಳ್ಳಲಿಲ್ಲ‘ ಎಂದು ಪ್ರಶ್ನಿಸಿದ್ದಾರೆ.

ಎನ್‌ಸಿಬಿಯವರು ಕ್ರೂಸ್ ಹಡಗಿನ ಮೇಲೆ ನಡೆಸಿರುವ ದಾಳಿ ನಕಲಿ, ಪೂರ್ವಯೋಜಿತ. ಇದು ಇಡೀ ಸಿನಿಮಾ ಕ್ಷೇತ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಮಾಡಿರುವ ಸಂಚು ಎಂದು ಮಲಿಕ್ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲಿಕ್ ಅವರು ಶುಕ್ರವಾರ ಎನ್‌ಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮೂವರನ್ನು ಬಿಡುಗಡೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು. ಈ ಮೂವರಲ್ಲಿ ಬಿಜೆಪಿ ನಾಯಕರ ಸೋದರ ಸಂಬಂಧಿ ಇದ್ದು, ಅವರ ಹೆಸರನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT