ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ರಾಜಕೀಯಕ್ಕೆ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕೇಂದ್ರ: ಮಮತಾ ಬ್ಯಾನರ್ಜಿ

Last Updated 8 ಸೆಪ್ಟೆಂಬರ್ 2021, 13:03 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರನ್ನು ಗುರಿಯಾಗಿಸುತ್ತಿದೆ. ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ದ್ವೇಷ ರಾಜಕೀಯ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಉಪಚುನಾವಣೆಗೆ ಭವಾನಿಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿದ್ದರೂ ಕೇವಲ ರಾಜಕೀಯ ಕಾರಣಗಳಿಗಾಗಿ ಬಿಜೆಪಿಯು ಅವರನ್ನು ಗುರಿಯಾಗಿಸುತ್ತಿದೆ ಎಂದೂ ದೂರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಕಲ್ಲಿದ್ದಲು ಹಗರಣಕ್ಕೆ ಸಂಬಂದಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು.

‘ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಲು ವಿರೋಧಿ ಶಕ್ತಿಗಳ ವಿರುದ್ಧ ಹೇಗೆ ಹೋರಾಡಿದ್ದೆವು ಎಂಬುದು ನಮಗೆ ಮಾತ್ರ ಗೊತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಇತರ ರಾಜ್ಯಗಳಿಂದ ಗೂಂಡಾಗಳನ್ನು ಕರೆಸಿತ್ತು. ನಂದಿಗ್ರಾಮದಲ್ಲಿ ನನ್ನ ವಿರುದ್ಧ ಮಾಡಲಾದ ಸಂಚಿನ ಪರಿಣಾಮವಾಗಿ ನಾನಿಂದು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

‘ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪಕ್ಷದ ನಾಯಕರಿಗೆ ಕೇಂದ್ರದ ಸಂಸ್ಥೆಗಳು ಸಮನ್ಸ್ ನೀಡಲಾರಂಭಿಸಿವೆ. ಅಭಿಷೇಕ್ ಬ್ಯಾನರ್ಜಿಯನ್ನೂ ಗುರಿಯಾಗಿಸಲಾಗುತ್ತಿದೆ’ ಎಂದು ಮಮತಾ ಹೇಳಿದ್ದಾರೆ.

ಈ ಮಧ್ಯೆ, ದೇಶಿ ಕೋವಿಡ್ ಲಸಿಕೆ ಕೋವ್ಯಾಕ್ಸಿನ್‌ಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ವಿಶ್ವ ಆರೋಗ್ಯ ಸಂಸ್ಥೆ ಜತೆ ಮಾತುಕತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಮತಾ ಆಗ್ರಹಿಸಿದ್ದಾರೆ. ಜಾಗತಿಕ ಮನ್ನಣೆ ದೊರೆತರೆ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೂ ವಿದೇಶಗಳಿಗೆ ಸಂಚರಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರ ಬಿಟ್ಟು ನಂದಿಗ್ರಾಮ ಕ್ಷೇತ್ರದಿಂದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಮತಾ ಬ್ಯಾನರ್ಜಿ ಅವರು ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಹೀಗಾಗಿ ಮಮತಾ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್‌ದೇವ್‌ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು.

ಸೆಪ್ಟೆಂಬರ್ 30ಕ್ಕೆ ಪಶ್ಚಿಮ ಬಂಗಾಳದಜಂಗೀಪುರ, ಸಮ್‌ಸೇರ್‌ಗಂಜ್ ಮತ್ತು ಭವಾನಿಪುರ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಟಿಎಂಸಿ ಈಗಾಗಲೇ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT