ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಉಪಚುನಾವಣೆಗೆ ಟಿಎಂಸಿ ಒತ್ತಡ ತಂತ್ರ

ಟಿಎಂಸಿ ನಿಯೋಗದಿಂದ ಆಯೋಗದ ಭೇಟಿ
Last Updated 14 ಜುಲೈ 2021, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಈ ಸಂಬಂಧ ಮಾತುಕತೆ ನಡೆಸಲು ಗುರುವಾರ (ಜು.15) ಆಯೋಗದ ಭೇಟಿಗೆ ನಿರ್ಧರಿಸಿದೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದ್ದು, ಚುನಾವಣಾ ಆಯೋಗವು ವಿಳಂಬ ಮಾಡದೇ ಸಾಧ್ಯವಾದಷ್ಟು ಬೇಗನೇ ಉಪಚುನಾವಣೆ ನಡೆಸಬೇಕು ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಅವರು ಒತ್ತಾಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶಕ್ಕೆ ಮೂರನೇ ಅಲೆ ಅಪ್ಪಳಿಸಲಿ ಎಂದು ಚುನಾವಣಾ ಆಯೋಗ ಕಾಯುತ್ತಿದೆಯೇ ಎಂದು ಕಿಡಿ ಕಾರಿದರು.

‘ವಿಧಾನಸಭೆಯ ತೆರವಾಗಿರುವ ಕ್ಷೇತ್ರಗಳಿಗೆ ಆದಷ್ಟು ಬೇಗ ಉಪಚುನಾವಣೆ ನಡೆಸುವ ಸಂಬಂಧ ದೆಹಲಿಯಲ್ಲಿ ಗುರುವಾರ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣ ಅಧಿಕವಾಗಿದ್ದಾಗ ವಿಧಾನಸಭಾ ಚುನಾವಣೆ ನಡೆಸಿದ್ದ ಆಯೋಗವು, ಈಗ ಪ್ರಕರಣ ಕಡಿಮೆಯಾಗಿರುವಾಗ ಉಪಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿದೆ’ ಎಂದು ಅವರು ಆರೋಪಿಸಿದ್ಧಾರೆ.

ಟಿಎಂಸಿ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ರಾಜ್ಯ ಸರ್ಕಾರವು ಪುರಸಭೆ ಚುನಾವಣೆಯನ್ನು ವಿಳಂಬ ಮಾಡುತ್ತಿದೆ. ಆದರೆ ಮಮತಾ ಅವರನ್ನು ವಿಧಾನಸಭೆಗೆ ಕಳುಹಿಸುವ ಸಲುವಾಗಿ ಉಪಚುನಾವಣೆ ಬಗ್ಗೆ ಕೂಗು ಹಾಕುತ್ತಿದೆ’ ಎಂದು ಕಿಡಿಕಾರಿದೆ.

ಭವಾನಿಪುರ, ಖಾರ್ದಾ, ಗೋಸಾಬಾ, ದಿನ್ಹಾಟಾ ಮತ್ತು ಸಂತಿಪುರದ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಬಾಕಿ ಇದೆ. ಕೋವಿಡ್‌ನಿಂದ ಬಳಲುತ್ತಿರುವ ಇಬ್ಬರು ಅಭ್ಯರ್ಥಿಗಳ ಸಾವಿನಿಂದಾಗಿ ಸಂಸರ್‌ಗಂಜ್ ಮತ್ತು ಜಂಗೀಪುರದಲ್ಲಿ ಚುನಾವಣೆಗಳನ್ನು ಮುಂದೂಡಲಾಗಿತ್ತು.

ಟಿಎಂಸಿಗೆ ಚುನಾವಣೆ ಅನಿವಾರ್ಯ

ಉಪಚುನಾವಣೆಯು ಟಿಎಂಸಿ ಪಕ್ಷಕ್ಕೆ ಈಗ ಅನಿವಾರ್ಯವಾಗಿದೆ. ಏಕೆಂದರೆ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರು, ಆರು ತಿಂಗಳ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಸಂವಿಧಾನದ ಪ್ರಕಾರ, ಆರು ತಿಂಗಳ ಒಳಗೆ ಆಯ್ಕೆಯಾಗದಿದ್ದರೆ, ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ.

ಪಕ್ಷದ ಮುಖಂಡ ಸೋವನ್‌ದೇವ್ ಚಟ್ಟೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿ ಅವರ ಆಯ್ಕೆಗೆ ಅವಕಾಶ ಮಾಡಿಕೊಡುವ ಸಲುವಾಗಿ ಭವಾನಿಪುರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT