ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿ 'ದೆಹಲಿ ಯಾತ್ರೆ': ಸೋನಿಯಾ ಸೇರಿ ಹಲವು ವಿಪಕ್ಷ ಮುಖಂಡರ ಭೇಟಿಗೆ ಸಜ್ಜು

ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಎದುರು ವಿರೋಧ ಪಕ್ಷಗಳ ರಾಷ್ಟ್ರೀಯ ಮೋರ್ಚಾ ರಚನೆಯಾಗುವ ಗಾಳಿ ಸುದ್ದಿಯ ನಡುವೆ ರಾಷ್ಟ್ರ ರಾಜಧಾನಿಗೆ ಮಮತಾ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ಇದೇ ತಿಂಗಳು ನಾಲ್ಕು ದಿನಗಳ ದೆಹಲಿ ಭೇಟಿಗೆ ಮಮತಾ ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖಂಡ ಶರದ್‌ ಪವಾರ್‌, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಎಎಪಿ ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಹಾಗೂ ಇತರೆ ಕೆಲವು ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

'ರಾಜ್ಯದಲ್ಲಿ ಚುನಾವಣೆಯ ಬಳಿಕ ನಾನು ದೆಹಲಿಗೆ ಭೇಟಿ ನೀಡಿಲ್ಲ. ಸದ್ಯ ಕೋವಿಡ್‌ ಪರಿಸ್ಥಿತಿಯು ಸುಧಾರಿಸುತ್ತಿದೆ. ಮುಂಗಾರು ಅಧಿವೇಶನದ ಸಮಯದಲ್ಲಿ ದೆಹಲಿಗೆ ತೆರಳಲಿದ್ದೇನೆ ಹಾಗೂ ಸ್ನೇಹಿತರನ್ನು ಭೇಟಿ ಮಾಡುತ್ತೇನೆ. ಭೇಟಿಗೆ ಸಮಯ ನೀಡಿದರೆ, ನಾನು ಪ್ರಧಾನಿ ಮತ್ತು ರಾಷ್ಟ್ರಪತಿ ಅವರನ್ನು ಸಹ ಭೇಟಿಯಾಗಬಹುದು' ಎಂದು ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಅವರ ದೆಹಲಿ ಭೇಟಿ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಈಗಾಗಲೇ ಎನ್‌ಸಿಪಿ ಮುಖ್ಯಸ್ಥ ಶರಾದ್‌ ಪವಾರ್‌ ಅವರೊಂದಿಗೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಎರಡು ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಪ್ರಮುಖರೊಂದಿಗೆ ಸುಮಾರು ನಾಲ್ಕು ತಾಸು ಕಿಶೋರ್‌ ಮಾತುಕತೆ ನಡೆಸಿದ್ದಾರೆ. ಪಂಜಾಬ್‌ನಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಹಾಗೂ ಮೂರು ವರ್ಷಗಳ ನಂತರ ನಡೆಯುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಿಶೋರ್‌ ಅವರಿಗೆ ಅಧಿಕೃತ ಸ್ಥಾನ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಮತಾ ಅವರ 'ದೆಹಲಿ ಯಾತ್ರೆ' ಮಹತ್ವ ಪಡೆದಿದೆ.

ಕೇಂದ್ರ ಸರ್ಕಾರವು ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ, ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಕಾಂಗ್ರೆಸ್‌, ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುವ ಸಾಧ್ಯತೆ ಇದೆ.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT