ಬುಧವಾರ, ಡಿಸೆಂಬರ್ 1, 2021
26 °C

ಜೆಪಿ, ಮೊರಾರ್ಜಿ ಸಾಲಿಗೆ ಸೇರುವ ನಾಯಕಿ ಮಮತಾ: ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PTI Photo

ನವದೆಹಲಿ: ಮಮತಾ ಬ್ಯಾನರ್ಜಿ ಅವರನ್ನು ಜಯಪ್ರಕಾಶ್‌ ನಾರಾಯಣ್‌, ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ, ಚಂದ್ರಶೇಖರ್‌ ಮತ್ತು ಪಿವಿ ನರಸಿಂಹ ರಾವ್‌ ಅವರೊಂದಿಗೆ ಹೋಲಿಸಿ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಶ್ಲಾಘಿಸಿದ್ದಾರೆ.

'ನಾನು ಭೇಟಿ ಮಾಡಿರುವ ಅಥವಾ ಜೊತೆಗೆ ಕೆಲಸ ಮಾಡಿರುವ ರಾಜಕಾರಣಿಗಳ ಪೈಕಿ ಮಮತಾ ಬ್ಯಾನರ್ಜಿ ಅವರು ಜೆಪಿ, ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ, ಚಂದ್ರಶೇಖರ್‌ ಮತ್ತು ಪಿವಿ ನರಸಿಂಹ ರಾವ್‌ ಅವರ ಸಾಲಿನಲ್ಲಿ ಸೇರುತ್ತಾರೆ. ಹೇಳಿದ್ದನ್ನು ಸಾಧಿಸುತ್ತಾರೆ ಮತ್ತು ಸಾಧಿಸುವಂತಹದ್ದನ್ನೇ ಮಾತನಾಡುತ್ತಾರೆ. ಭಾರತದ ರಾಜಕಾರಣದಲ್ಲಿ ಇಂತಹದ್ದು ಅಪರೂಪ' ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಮತಾ ಬ್ಯಾನರ್ಜಿ ಅವರಿಗೆ ರೋಮ್‌ನಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಬಹಿರಂಗವಾಗಿ ಸುಬ್ರಮಣಿಯನ್‌ ಸ್ವಾಮಿ ಬೆಂಬಲ ಸೂಚಿಸಿದ್ದರು. ಬಳಿಕ ಉಭಯ ನಾಯಕರ ಭೇಟಿ ವಿಚಾರವಾಗಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.

ಭೇಟಿ ನಂತರ ಟಿಎಂಸಿ ಸೇರ್ಪಡೆ ಬಗೆಗಿನ ವದಂತಿಗಳಿಗೆ ತೆರೆ ಎಳೆದಿರುವ ಸುಬ್ರಮಣಿಯನ್‌ ಸ್ವಾಮಿ, 'ಮಮತಾ ಅವರ ಜೊತೆಗೆ ಇದ್ದೇನೆ. ನನಗೆ ಟಿಎಂಸಿ ಪಕ್ಷಕ್ಕೆ ಸೇರುವ ಅಗತ್ಯತೆ ಇಲ್ಲ' ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ ಸೇರಲು ಹಲವು ರಾಜಕಾರಣಿಗಳು ತಮ್ಮ ಪಕ್ಷಗಳನ್ನು ತೊರೆದಿದ್ದಾರೆ. ಕಾಂಗ್ರೆಸ್‌ ನಾಯಕರಾದ ಕೀರ್ತಿ ಆಜಾದ್‌ ಮತ್ತು ಅಶೋಕ್‌ ತನ್ವರ್‌ ಮಂಗಳವಾರ ಟಿಎಂಸಿ ಸೇರ್ಪಡೆಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳು ಮತ್ತು ಚೀನಾ ವಿರುದ್ಧ ಭಾರತದ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ಸುಬ್ರಮಣಿಯನ್‌ ಸ್ವಾಮಿ ನಿರಂತರವಾಗಿ ಹೊರ ಹಾಕುತ್ತ ಬಂದಿದ್ದಾರೆ.

ರಾಷ್ಟ್ರದಾದ್ಯಂತ ಪಕ್ಷವನ್ನು ವಿಸ್ತರಿಸುವ ಬಹು ಆಕಾಂಕ್ಷೆಯಲ್ಲಿರುವ ಟಿಎಂಸಿ ಹಲವು ರಾಜಕೀಯ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು