ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು

ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಪ್ರತಿಪಕ್ಷಗಳ ನಾಯಕರ ಸಭೆ
Last Updated 14 ಜೂನ್ 2022, 15:52 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವದೆಹಲಿಯಲ್ಲಿ ಬುಧವಾರ (ಜೂನ್ 15) ಬಿಜೆಪಿಯೇತರ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಕಾಂಗ್ರೆಸ್ ಭಾಗಿಯಾಗುವ ಸಾಧ್ಯತೆ ಇದ್ದು, ಪಕ್ಷದ ಪರವಾಗಿ ಪಕ್ಷದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್‌ ರಮೇಶ್‌, ರಣದೀಪ್‌ ಸಿಂಗ್ ಸುರ್ಜೆವಾಲಾ ಅವರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಮಂಗಳವಾರ ನವದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಎಡಪಕ್ಷಗಳ ನಾಯಕರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗುವಂತೆ ಮನವೊಲಿಸಲು ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು, ‘ಚುನಾವಣೆಗೆ ನಿಲ್ಲಲು ಪವಾರ್ ನಿರಾಕರಿಸಿದರು. ಚುನಾವಣೆಗೆ ಇತರರ ಹೆಸರುಗಳನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಎನ್‌ಸಿಪಿ ಮುಖಂಡರಾದ ಪ್ರಫುಲ್‌ ಪಟೇಲ್ ಮತ್ತು ಪಿ.ಸಿ. ಚಾಕೊ ಅವರನ್ನು ಭೇಟಿಯಾದ ಪವಾರ್, ತಾವು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಭೇಟಿ ಕುರಿತು ಟ್ವೀಟ್‌: ಮಮತಾ ಜೊತೆಗಿನ ತಮ್ಮ ಭೇಟಿಯ ಕುರಿತು ಟ್ವೀಟ್ ಮಾಡಿರುವ ಶರದ್ ಪವಾರ್, ‘ಮಮತಾ ಅವರು ಮಂಗಳವಾರ ದೆಹಲಿಯ ನನ್ನ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿದರು. ದೇಶಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ನಾವು ವಿವರವಾದ ಚರ್ಚೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

‘ಎಲ್ಲ ಪ್ರಗತಿಪರ ವಿರೋಧಶಕ್ತಿಗಳ ಸಭೆಗೆ ಇಬ್ಬರು ಧೀಮಂತ ನಾಯಕರು ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. ನವದೆಹಲಿಯ ಕಾನ್‌ಸ್ಟಿಟ್ಯೂಷನಲ್ ಕ್ಲಬ್‌ನಲ್ಲಿ ಬುಧವಾರ ಸಭೆ ನಡೆಯಲಿದೆ. ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಬಲಗೊಳ್ಳುತ್ತದೆ!’ ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪವಾರ್ ಅವರು ತಮ್ಮ ರಾಜಕೀಯ ಜೀವನದಲ್ಲಿನ ಈ ಹಂತದಲ್ಲಿ ಸೋಲುವುದನ್ನು ಬಯಸುವುದಿಲ್ಲ ಎಂದು ವಿರೋಧಪಕ್ಷಗಳ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಜುಲೈ 18ರಂದುರಾಷ್ಟ್ರಪತಿಚುನಾವಣೆನಡೆಯಲಿದೆ.

ಮಮತಾ ಏಕಪಕ್ಷೀಯ ನಿರ್ಧಾರ: ಎಡಪಕ್ಷಗಳ ಅಸಮಾಧಾನ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ವಿರೋಧಪಕ್ಷಗಳ ಒಮ್ಮತದ ಅಭ್ಯರ್ಥಿಯ ಕುರಿತು ಚರ್ಚಿಸಲು ಸಭೆ ಕರೆದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಏಕಪಕ್ಷೀಯ ನಿರ್ಧಾರಕ್ಕೆ ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ ಅಸಮಾಧಾನ ವ್ಯಕ್ತಪಡಿಸಿವೆ.

ಜೂನ್ 15ರಂದು ನಡೆಯಲಿರುವ ಸಭೆಗೆ ನಮ್ಮ ಪಕ್ಷಗಳ ಉನ್ನತ ನಾಯಕರು ಹಾಜರಾಗುವುದಿಲ್ಲ. ಬದಲಿಗೆ ಪಕ್ಷಗಳ ಸಂಸದರು ಹಾಜರಾಗಲಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

ಯೆಚೂರಿ ಅವರು ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದು, ಸಭೆ ಕರೆಯುವ ಏಕಪಕ್ಷೀಯ ತೀರ್ಮಾನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಮತಾ ಸಭೆಯಲ್ಲಿ ರಾಜ್ಯಸಭೆಯಲ್ಲಿ ಸಿಪಿಎಂ ಅನ್ನು ಪ್ರತಿನಿಧಿಸುವ ಪಕ್ಷದ ನಾಯಕ ಎಳಮರಮ್ ಕರೀಂ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT