ಗುರುವಾರ , ಫೆಬ್ರವರಿ 2, 2023
27 °C
ಸೋದರ ಸಂಬಧಿಯನ್ನು ಅಪಹರಣ ಮಾಡಿ ರುಂಡ ಛೇದನ

ಆಸ್ತಿ ವಿವಾದ: ಸೋದರ ಸಂಬಂಧಿಯ ತಲೆ ಕಡಿದು ಕೊಲೆ, ಸೆಲ್ಫಿ ತೆಗೆದುಕೊಂಡು ವಿಕೃತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

‌ಕುಂತಿ (ಜಾರ್ಖಂಡ್‌): ಆಸ್ತಿ ವ್ಯಾಜ್ಯ ಸಂಬಂಧ ಬುಡಕಟ್ಟು ಸಮುದಾಯಕ್ಕೆ ಸೇರಿದ 20 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯ ತಲೆ ಕಡಿದು, ಬಳಿಕ ಆ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮಾನವೀಯ ದುಷ್ಕೃತ್ಯ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ.

ಕುಂತಿ ಜಿಲ್ಲೆಯ ಮುಹದ್ರು ಎಂಬಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಆರೋಪಿ, ಆತನ ಪತ್ನಿ ಸೇರಿ ಒಟ್ಟು 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎನ್ನುವುದು ಪೊಲೀಸರು ನೀಡಿದ ಮಾಹಿತಿ.

ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ಕಟುಂಬದ ನಡುವೆ ದೀರ್ಘ ಕಾಲದಿಂದ ಆಸ್ತಿ ವ್ಯಾಜ್ಯ ಇತ್ತು. ಹೀಗಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಹಿನ್ನಲೆ

ಕೊಲೆಯಾದ 24 ವರ್ಷದ ಕನು ಮುಂಡಾ ಎಂಬಾತನನ್ನು, ಆರೋಪಿ ಸಾಗರ್‌ ಮುಂಡಾ ಹಾಗೂ ಆತನ ಸ್ನೇಹಿತರು ಅಪಹರಿಸಿದ್ದಾರೆ. ಕನು ಮುಂಡಾ ಮನೆಯ ಉಳಿದ ಸದಸ್ಯರೆಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದಾಗ, ಈ ಕೃತ್ಯ ಎಸಗಲಾಗಿದೆ. ಸಂಜೆ ಕೂಲಿ ಮುಗಿಸಿ ಮನೆಗೆ ಬಂದಾಗ, ಊರವರು ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾರೆ. ಹುಡುಕಿದರೂ ಕನು ಮುಂಡಾ ಪತ್ತೆಯಾಗದಿದ್ದರಿಂದ ಆತನ ತಂದೆ ದಸಯ್‌ ಮುಂಡಾ ಪೊಲೀಸರಿಗೆ ದೂರು ನೀಡಿದ್ದಾರೆ.

ತಂಡ ರಚಿಸಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಆರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋ‍ಪಿಗಳು ನೀಡಿದ ಮಾಹಿತಿ ಆಧರಿಸಿ ತನಿಖೆ ಮಾಡಿದಾಗ, ಕುಮಂಗ್ ಗುಪ್ಲಾ ಕಾಡಿನಲ್ಲಿ ಕನು ಮುಂಡಾನ ಮುಂಡ ಪತ್ತೆಯಾಗಿದೆ.

ಮೃತ ಕನು ಮುಂಡಾ ಅವರದ್ದೂ ಸೇರಿ ಒಟ್ಟು ಐದು ಮೊಬೈಲ್‌, 2 ರಕ್ತಸಿಕ್ತ ಆಯುಧಗಳು, ಒಂದು ಕೊಡಲಿ ಹಾಗೂ ಒಂದು ಎಸ್‌ಯುವಿ ವಶಪಡಿಸಿಕೊಳ್ಳಲಾಗಿದೆ.

ಕನು ಮುಂಡನ ತಲೆ ಕತ್ತರಿಸಿದ ಬಳಿಕವೂ ಆರೋಪಿಗಳು ವಿಕೃತಿ ಮರೆದಿದ್ದು, ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು