ಬುಧವಾರ, ಮಾರ್ಚ್ 3, 2021
18 °C
ಸಿಂಘು ಗಡಿ ಭಾಗದಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆ

ಪ್ರತಿಭಟನಾ ನಿರತ ನಾಲ್ವರು ರೈತ ನಾಯಕರ ಹತ್ಯೆಗೆ ಸಂಚು: ವ್ಯಕ್ತಿ ಪೊಲೀಸ್ ವಶಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಚಂಡಿಗಡ: ದೆಹಲಿಯಲ್ಲಿ ಇದೇ 26ರಂದು ರೈತ ಸಂಘಟನೆಗಳು ನಡೆಸಲಿರುವ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಾಲ್ವರು ರೈತ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿ ಗಲಭೆ ನಡೆಸಲು ಪ್ರಯತ್ನಿಸಿದ್ದ ಎಂದು ಆರೋಪಿಸಿ ರೈತರು ವಶಪಡಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಈ ವ್ಯಕ್ತಿಯನ್ನು ಹಾಜರುಪಡಿಸಿದ್ದರು. ಪ್ರತಿಭಟನಾ ಸ್ಥಳದಲ್ಲೇ ಈತನನ್ನು ಹಿಡಿಯಲಾಗಿತ್ತು ಎಂದು ರೈತ ಮುಖಂಡರು ತಿಳಿಸಿದ್ದಾರೆ.

‘ಈಗಾಗಲೇ ಮಾಧ್ಯಮಗಳಲ್ಲಿ ಪರಿಚಿತವಾಗಿರುವ ನಾಲ್ವರು ರೈತ ಮುಖಂಡರಿಗೆ ಗುಂಡಿಕ್ಕುವ ಯೋಜನೆ ರೂಪಿಸಲಾಗಿತ್ತು‘ ಎಂದು ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡಿದ್ದ ಆ ವ್ಯಕ್ತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾನೆ.

‌‘ಜನವರಿ 26 ರಂದು, ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸುವ ಮೂಲಕ ಟ್ರ್ಯಾಕ್ಟರ್ ಪೆರೇಡ್ ಸಮಯದಲ್ಲಿ ಗಲಭೆ ಸೃಷ್ಟಿಸುವ ಯೋಜನೆ ಇತ್ತು. ಇದರಿಂದ, ಪೊಲೀಸರು ರೊಚ್ಚಿಗೆದ್ದು ರೈತರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುತ್ತಾರೆ. ಪ್ರತಿಭಟನಾ ನಿರತ ರೈತರ ವಿರುದ್ಧ ಪ್ರಬಲ ರೀತಿಯಲ್ಲಿ ಪ್ರತೀಕಾರ ತೀರಿಸುವ ಪ್ರಯತ್ನ ಇದಾಗಲಿದೆ‘ ಎಂದು ಆತ ಹೇಳಿದ್ದ.

‘ಪೊಲೀಸರ ವೇಷಧಲ್ಲಿ ಪ್ರತಿಭಟನೆಯಲ್ಲಿ ಸೇರಿ ರೈತರ ಮೇಲೆ ಲಾಠಿ ಪ್ರಹಾರ ಮಾಡಬೇಕು ಎಂದು ನಮ್ಮ ನಾಲ್ವರು ಸಹಚರರಿಗೆ ತಿಳಿಸಲಾಗಿತ್ತು’ ಎಂದು ಆತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದ.

ಸುದ್ದಿಗೋಷ್ಠಿಯ ನಂತರ ಆ ವ್ಯಕ್ತಿಯನ್ನು ರೈತ ಮುಖಂಡರು ಹರಿಯಾಣ ಪೊಲೀಸರ ವಶಕ್ಕೆ ನೀಡಿದರು. ‘ರೈತರು ಹಸ್ತಾಂತರಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಶ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ವಶಕ್ಕೆ ಪಡೆದಿರುವ 21 ವರ್ಷದ ವ್ಯಕ್ತಿ ಸೋನಿಪತ್‌ ನಿವಾಸಿ ಎನ್ನಲಾಗಿದ್ದು, ಈ ವ್ಯಕ್ತಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆತನ ಬಳಿ ಯಾವುದೇ ಆಯುಧ, ಶಸ್ತ್ರಾಸ್ತ್ರಗಳಿರಲಿಲ್ಲ. ಪ್ರತಿಭಟನೆಗೆ ಸಂಚು ರೂಪಿಸಿರುವ ಕುರಿತ ಯಾವುದೇ ಸುಳಿವೂ ದೊರೆತಿಲ್ಲ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

‘ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ‘ ಎಂದು ರೈತ ನಾಯಕ ಕುಲ್ವಂತ್ ಸಂಧು ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು