ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ವಿಧಾನಸಭಾ ಚುನಾವಣೆ: ಮಹಿಳೆಯರಿಗೆ ಇಲ್ಲ ಮನ್ನಣೆ

ಕಣದಲ್ಲಿ ಇರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 17 ಮಾತ್ರ
Last Updated 21 ಫೆಬ್ರುವರಿ 2022, 17:49 IST
ಅಕ್ಷರ ಗಾತ್ರ

ಇಂಫಾಲ್‌: ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ 17 ಮಾತ್ರ. ಕಣದಲ್ಲಿರುವ ಅಭ್ಯರ್ಥಿಗಳ ಒಟ್ಟು ಸಂಖ್ಯೆ 265. ಮಹಿಳೆಯರಿಗೆ ಮೀಸಲಾತಿ ಸಿಗದೇ ಇದ್ದರೆ ಶಾಸನ ಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಲು ಸಾಧ್ಯವೇ ಇಲ್ಲ ಎಂದು ಮಣಿಪುರದ ಮಹಿಳಾ ರಾಜಕೀಯ ನಾಯಕಿಯರು ಹೇಳುತ್ತಾರೆ.

ಮಣಿಪುರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು. ಮಹಿಳಾ ಮತದಾರರು 10.57 ಲಕ್ಷ ಇದ್ದರೆ, ಪುರುಷ ಮತದಾರರ ಸಂಖ್ಯೆ 9.90 ಲಕ್ಷ. ಸಾಮಾಜಿಕ ಚಳವಳಿಗಳು ನಡೆದಾಗಲೆಲ್ಲ ಅದರ ಮುನ್ನೆಲೆಯಲ್ಲಿ ಮಹಿಳೆಯರೇ ನಿಂತಿದ್ದಾರೆ. ಆದರೆ, ರಾಜಕಾರಣದಲ್ಲಿ ಮಾತ್ರ ಪುರುಷ ‍ಪ್ರಾಬಲ್ಯದ ಪರಂಪರೆಯಿಂದಾಗಿ ಮಹಿಳೆಯರು ಮುಂದಕ್ಕೆ ಬರುವುದು ಸಾಧ್ಯವಾಗುತ್ತಿಲ್ಲ.

ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಮೂವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಮತ್ತು ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ತಲಾ ಇಬ್ಬರು ಮಹಿಳೆಯರಿಗೆ ಟಿಕೆಟ್‌ ನೀಡಿವೆ. ರಾಜಕೀಯವಾಗಿ ಸಶಕ್ತಗೊಳಿಸದೆ ಮಹಿಳೆಯರು ಪ್ರಬಲರಾಗುವುದು ಸಾಧ್ಯವಿಲ್ಲ ಎಂದು ಮಹಿಳಾ ನಾಯಕಿಯರು ವಾದಿಸುತ್ತಾರೆ.

‘ಎಲ್ಲ ರಂಗಗಳಲ್ಲಿಯೂ ಈಶಾನ್ಯದ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ, ಮಹಿಳೆಯರು ರಾಜಕಾರಣಕ್ಕೆ ಬರುವುದಕ್ಕೆ ಸಮಾಜವು ಪ್ರೋತ್ಸಾಹ ನೀಡುವುದಿಲ್ಲ. ಮಹಿಳೆಯರು ರಾಜಕೀಯಕ್ಕೆ ಬರುವುದು ಕೀಳು ಎಂದು ನೋಡಲಾಗುತ್ತಿದೆ’ ಎಂದು ಮಣಿಪುರ ಪ್ರದೇಶ ಬಿಜೆಪಿ ಅಧ್ಯಕ್ಷೆ ಎ. ಶಾರದಾ ದೇವಿ ಹೇಳುತ್ತಾರೆ.

‘ಮಣಿಪುರವು ರಾಜ ಪ್ರಭುತ್ವದ ಅಡಿಯಲ್ಲಿ ಇದ್ದಾಗಲೂ ಮಹಿಳೆಯರು ರಾಜಕೀಯದಲ್ಲಿ ಭಾಗಿಯಾಗಿದ್ದರು. ಆದರೆ, ಸಮಾಜದ ಯೋಚನಾ ಕ್ರಮದ ಕಾರಣದಿಂದಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗುವ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ’ ಎಂದು ಶಾರದಾ ದೇವಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಅವರು ತಮ್ಮ ಪಕ್ಷದ ಉದಾಹರಣೆಯನ್ನೇ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಈ ಬಾರಿ ಅದು ಮೂರಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ಇದು ಪುರುಷ ಪ‍್ರಾಬಲ್ಯದ ಸಮಾಜ. ಮಹತ್ವಾಕಾಂಕ್ಷಿ ಮಹಿಳಾ ಅಭ್ಯರ್ಥಿಗಳು ಪುರುಷರಿಂದ ಸ್ಥಾನ ಕಸಿದುಕೊಳ್ಳುವುದು ಸುಲಭವಲ್ಲ’ ಎಂದು ಕಾಂಗ್ರೆಸ್‌ನ ಮೀರಾಬಾಯಿ ದೇವಿ ಹೇಳುತ್ತಾರೆ. ಅವರು ಎರಡು ಬಾರಿ ಶಾಸಕಿ ಆಗಿದ್ದಾರೆ ಮತ್ತು ಒಮ್ಮೆ ಸಚಿವೆಯೂ ಆಗಿದ್ದರು. ಪಸ್ಟೋಯಿ ಕ್ಷೇತ್ರದಿಂದ ಸತತ ಮೂರನೇ ಅವಧಿಗೆ ಟಿಕೆಟ್‌ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ‘ಶೇ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲು ಆಗದೇ ಇದ್ದರೆ ಶಾಸನ ಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುವುದೇ ಇಲ್ಲ’ ಎಂಬುದು ಮೀರಾಬಾಯಿ ಅವರ ಅಭಿಪ್ರಾಯ.

ಸುಮತಿ ದೇವಿ (ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ) ಅವರು ಲಮ್‌ಸಂಗ್‌ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವನ್ನು ಹಿಂದೆ ಅವರ ಗಂಡ ಬ್ರಜಬಿದು ಸಿಂಗ್‌ ಮೂರು ಬಾರಿ ಪ್ರತಿನಿಧಿಸಿದ್ದರು. ಅವರು ಸಚಿವರೂ ಆಗಿದ್ದರು. ಅವರ ಮರಣಾನಂತರ ಸುಮತಿ ಅವರು ಕಣಕ್ಕೆ ಇಳಿದಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ಇದ್ದರೂ ರಾಜಕೀಯ ಸಶಕ್ತೀಕರಣ ಆಗಲೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಹಣಕಾಸಿನ ಸ್ವಾತಂತ್ರ್ಯ ಬೇಕು’

ಹಣಕಾಸಿನ ಸ್ವಾತಂತ್ರ್ಯ, ಗೆಲ್ಲುವ ಅಭ್ಯರ್ಥಿ ಎಂದು ಸ್ಥಾಪಿಸುವುದು ಮಹಿಳೆಯರಿಗೆ ರಾಜಕೀಯದಲ್ಲಿ ಇರುವ ಪ್ರಮುಖ ಸವಾಲುಗಳು ಎಂದು ಶಾರದಾ ದೇವಿ ಹೇಳುತ್ತಾರೆ. ರಾಜಕೀಯಕ್ಕೆ ಬರುವ ಉತ್ಸಾಹ ಇರುವ ಮಹಿಳೆಯರು ಮೊದಲಿಗೆ ಸಮಾಜವು ಗುರುತಿಸುವಂತಹ ಕೆಲಸ ಮಾಡಬೇಕು ಎಂದು ಮೀರಾಬಾಯಿ ಅವರು ಸಲಹೆ ನೀಡುತ್ತಾರೆ.

ಮಹಿಳೆಯರು ಹಣಕ್ಕಾಗಿ ಗಂಡ ಅಥವಾ ಕುಟುಂಬದ ಮೇಲೆ ಅವಲಂಬಿತರಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸ್ವತಂತ್ರರಾಗುವುದು ಹೇಳಿದಷ್ಟು ಸುಲಭವಲ್ಲ. ಆರ್ಥಿಕವಾಗಿ ಸಬಲರಾಗಲು ಕೂಡ ಮಹಿಳೆಯರು ಕೆಲಸ ಮಾಡಬೇಕು ಎಂದು ಮೀರಾಬಾಯಿ ಹೇಳುತ್ತಾರೆ. ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವುದು ಸುದೀರ್ಘವಾದ ಹಾದಿ. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸಲು ಎಲ್ಲ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT