ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂಗೆ ಸವಾಲೆಸೆದ ಪೊಲೀಸ್‌ ಅಧಿಕಾರಿ ಈಗ ಜೆಡಿಯು ಅಭ್ಯರ್ಥಿ

Last Updated 26 ಫೆಬ್ರುವರಿ 2022, 21:54 IST
ಅಕ್ಷರ ಗಾತ್ರ

ಗುವಾಹಟಿ: ಮಣಿಪುರದ ಯಸಿಕುಲ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬೃಂದಾ ತೌನವೊಜಮ್‌ (41) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಬೃಂದಾ ಪೊಲೀಸ್‌ ಅಧಿಕಾರಿ ಆಗಿದ್ದವರು. ಹೆಚ್ಚುವರಿ ಎಸ್‌ಪಿ ಆಗಿದ್ದ ಅವರು ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದಿದ್ದಾರೆ.

2018ರಲ್ಲಿ ನಡೆದ ಡ್ರಗ್ಸ್‌ ಕಳ್ಳ ಸಾಗಣೆ ಪ್ರಕರಣದ ಆರೋಪಿಯೊಬ್ಬನನ್ನು ಬಿಡುಗಡೆ ಮಾಡುವಂತೆ ಮತ್ತು ಆರೋಪಪಟ್ಟಿಯನ್ನು ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಬೀರೆನ್‌ ಸಿಂಗ್‌ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಮಣಿಪುರ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಬೃಂದಾ ಹೇಳಿದ್ದಾರೆ. ಬೃಂದಾ ಅವರು ಕಟ್ಟು
ನಿಟ್ಟಿನ ಅಧಿಕಾರಿ ಎಂದೇ ಹೆಸರು ಗಳಿಸಿದ್ದರು. ಬೃಂದಾ ಅವರು ನ್ಯಾಯಾಲಯವನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಡ್ರಗ್ಸ್‌ ಪ್ರಕರಣದ ಆರೋಪಿ ಲುಖೋಸೈ ಝೌಗೆ ಮೂರು ವಾರಗಳ ಜಾಮೀನು ನೀಡಿದ್ದನ್ನು ಬೃಂದಾ ಪ್ರಶ್ನಿಸಿದ್ದರು.ಹಾಗಾಗಿ ಅವರ ವಿರುದ್ಧ ನ್ಯಾಯಾಲಯವು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬೃಂದಾ ಅವರು ಪ್ರಮಾಣಪತ್ರ ಸಲ್ಲಿಸಿದ್ದರು.

ಚಂಡೆಲ್‌ನ ಸ್ವಾಯತ್ತ ಜಿಲ್ಲಾ ಮಂಡಳಿಯ ಸದಸ್ಯ ಝೌ ಮತ್ತು ಇತರ ಏಳು ಮಂದಿಯನ್ನು ಬೃಂದಾ ನೇತೃತ್ವದ ಮಾದಕ ಪದಾರ್ಥ ಮತ್ತು ಗಡಿ ವ್ಯವಹಾರಗಳ ತಂಡವು 2018ರ ಜೂನ್‌ 19ರಂದು ಬಂಧಿಸಿತ್ತು. ಅವರಿಂದ 4.5 ಕಿಲೋ ಹೆರಾಯಿನ್‌ ಪುಡಿ ಮತ್ತು ಇತರ ಡ್ರಗ್ಸ್‌ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಬಂಧನದ ಬಳಿಕ, ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಬೃಂದಾ ಅವರಿಗೆ ಕರೆ ಮಾಡಿ, ಬೀರೆನ್‌ ಸಿಂಗ್‌ ಅವರ ಹತ್ತಿರ ಮಾತನಾಡಿಸಿದ್ದರು. ಝೌ ಅವರನ್ನು ಬಿಡುಗಡೆ ಮಾಡಿ ಅವರ ಹೆಂಡತಿ ಅಥವಾ ಮಗನ ಹೆಸರಿನಲ್ಲಿ ಬೇಕಿದ್ದರೆ ಪ್ರಕರಣ ದಾಖಲಿಸಿ ಎಂದು ಬೀರೆನ್‌ ಸಿಂಗ್‌ ಹೇಳಿದ್ದರು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಬೀರೆನ್‌ ಅವರ ಹೆಂಡತಿಯ ನಿಕಟವರ್ತಿ ಎಂಬ ಕಾರಣಕ್ಕೆ ಝೌ ಬಿಡುಗಡೆ ಆಗಬೇಕು ಎಂದು ಮುಖ್ಯಮಂತ್ರಿ ಬಯಸಿದ್ದಾರೆ ಎಂದು ಸ್ಥಳೀಯ ಮುಖಂಡ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದೂ ಬೃಂದಾ ಆರೋಪಿಸಿದ್ದರು. ಬೃಂದಾ ಅವರು ಝೌನನ್ನು ಬಿಡುಗಡೆ ಮಾಡಲಿಲ್ಲ. ನಂತರ, ಆರೋಪಪಟ್ಟಿಯನ್ನೂ ದಾಖಲಿಸಿದ್ದಾರೆ. ಮುಖ್ಯಮಂತ್ರಿಯ ಜತೆ ಜಟಾಪಟಿಯ ಬಳಿಕ ಬೃಂದಾ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾನೂನು ಸಚಿವ ಸತ್ಯವ್ರತ ಸಿಂಗ್‌ ವಿರುದ್ಧ ಬೃಂದಾ ಅವರು ಜೆಡಿಯು ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ.

ಮುಖ್ಯಮಂತ್ರಿಯನ್ನು ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಹಲವು ಬಾರಿ ‍ಪ್ರಶ್ನಿಸಿದ್ದರು. ಅವರು ಆರೋಪ ನಿರಾಕರಿಸಿದ್ದಾರೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಏನನ್ನೂ ಹೇಳಲಾಗದು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT