ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಚುನಾವಣೆ | ಕಾಂಗ್ರೆಸ್ ಪರ ಅಲೆ: ಇಬೋಬಿ

Last Updated 15 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಗುವಾಹಟಿ: ‘ಮಣಿಪುರದ ಚಿಂತೆ ಬಿಟ್ಟುಬಿಡಿ’ – ಇದು ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಒಕ್ರಮ್ ಇಬೋಬಿ ಸಿಂಗ್ ಅವರು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಹೇಳಿದ ಸರಳ ಮಾತು. ಮಣಿಪುರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ವರ್ಚುವಲ್ ಸಂವಾದದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಇಬೋಬಿ ಸಿಂಗ್ ಭಾಗಿಯಾಗಿದ್ದರು.

‘ಮಣಿಪುರದ ಜನರು ಬದಲಾವಣೆ ಬಯಸಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ವಿರುದ್ಧ ಸೆಟೆದು ನಿಂತಿದ್ದಾರೆ. ರಾಜ್ಯದಲ್ಲಿ ನಮ್ಮ ಪರವಾದ ಅಲೆ ಇದೆ. ಯುದ್ಧದ ರೀತಿಯಲ್ಲಿ ನಾವು ರಾಜ್ಯದ ಚುನಾವಣೆಯನ್ನು ಬಲಿಷ್ಠ ಶಕ್ತಿಯೊಂದಿಗೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ’ ಎಂದು ಇಬೋಬಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರು 2002ರಿಂದ 2017ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಮಣಿಪುರದಲ್ಲಿ ಫೆ. 28 ಹಾಗೂ ಮಾರ್ಚ್ 3ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, 60ರ ಪೈಕಿ 54 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಇಬೋಬಿ ಅವರನ್ನೇ ಪಕ್ಷ ನೆಚ್ಚಿಕೊಂಡಿದ್ದು, ಐದು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ.

2017ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಪ್ರಾದೇಶಿಕ ಪಕ್ಷಗಳಾದ ಎನ್‌ಪಿಪಿ ಹಾಗೂ ಎನ್‌ಪಿಎಫ್ ಸಹಕಾರದಿಂದ ಬಿಜೆಪಿ ಅಧಿಕಾರಕ್ಕೆ ಏರಿತ್ತು. ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಕಂಥೋಜಮ್ ಗೋವಿಂದದಾಸ್ ಸೇರಿದಂತೆ ಹಲವರು ಚುನಾವಣೆಗೆ ಮುನ್ನ ಬಿಜೆಪಿ ಸೇರ್ಪಡೆಯಾದ ಬಳಿಕ ಇಬೋಬಿ ಅವರ ಮೇಲೆ ಒತ್ತಡ ಹೆಚ್ಚಿದೆ.

ಬಿಜೆಪಿ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ, ಕಾಂಗ್ರೆಸ್ ನಾಯಕರು ಇನ್ನೂ ಏಕೆ ರಾಜ್ಯದತ್ತ ಸುಳಿದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಿರಣ್ ರಿಜಿಜು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೊದಲಾದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಪ್ರಚಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT