ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಚುನಾವಣೆ: ಬಿಜೆಪಿ ನೇತೃತ್ವದ ಮೈತ್ರಿಗೆ ಮತ್ತೆ ಮಣೆ

Last Updated 10 ಮಾರ್ಚ್ 2022, 21:13 IST
ಅಕ್ಷರ ಗಾತ್ರ

ಇಂಫಾಲ್ : ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನ ಗೆದ್ದಿದ್ದು, ಸ್ವಂತಬಲದಿಂದ ಸರಳ ಬಹುಮತ ಪಡೆಯುವಲ್ಲಿ ಶಕ್ತವಾಗಿದೆ. ಅದರ ಮೈತ್ರಿಪಕ್ಷ ನ್ಯಾಷನಲ್ ಪೀಪಲ್ಸ್‌ ಪಾರ್ಟಿ 7 ಸ್ಥಾನ, ಎನ್‌ಡಿಎ ಭಾಗವಾಗಿರುವ ಜೆಡಿಯು 6 ಸ್ಥಾನ ಪಡೆದಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.

ಈ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಬಹುದು, ಆಡಳಿತ ವಿರೋಧಿ ಅಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರಗಳು ತಲೆಕೆಳಕಾಗಿವೆ. ಕಾಂಗ್ರೆಸ್‌ನದು ಈ ಬಾರಿ ನೀರಸ ಪ್ರದರ್ಶನ. ಮಾಜಿ ಮುಖ್ಯಮಂತ್ರಿ ಐಬೂಬಿ ಸಿಂಗ್ ಸೇರಿ ಕಾಂಗ್ರೆಸ್‌ನ ನಾಲ್ವರಷ್ಟೇ ಗೆಲುವಿನ ದಡಮುಟ್ಟಿದ್ದಾರೆ. ಮಣಿಪುರದ ರಾಜಕೀಯ ಇತಿಹಾಸದಲ್ಲೇ ಈ ಫಲಿತಾಂಶವು ಕಾಂಗ್ರೆಸ್‌ನ ಅತ್ಯಂತ ಕಳಪೆ ಸಾಧನೆಯಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ, ಶಾಂತಿ ಸ್ಥಾಪನೆ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಭರವಸೆ ನೀಡಿದ್ದ ಬಿಜೆಪಿಗೆ ಜನರು ಮಣೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ವಿರೋಧಪಕ್ಷ ಕಾಂಗ್ರೆಸ್‌ ಮತ್ತು ಆಡಳಿತರೂಢ ಮೈತ್ರಿಕೂಟದ ಭಾಗವೇ ಆಗಿದ್ದ ಎರಡು ಪ್ರಾದೇಶಿಕ ಪಕ್ಷಗಳು ತೆಗೆದುಕೊಂಡಿದ್ದ ‘ಆಫ್‌ಸ್ಪ’ ವಿರೋಧಿ ನಿಲುವನ್ನು ಮತದಾರರು ಈ ಫಲಿತಾಂಶದ ಮೂಲಕ ಸ್ಪಷ್ಟವಾಗಿ ನಿರಾಕರಿಸಿದಂತಾಗಿದೆ.

ಹೀಂಗಾಂಗ್‌ ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿರುವ ಮುಖ್ಯಮಂತ್ರಿ ಬಿರೆನ್‌ ಸಿಂಗ್ ಅವರು, ‘ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಉಗ್ರಗಾಮಿ ಪಿಡುಗು ಕೊನೆಗಾಣಿಸುವ ಭರವಸೆ ಪಕ್ಷದ ಕೈಹಿಡಿದಿದೆ’ ಎಂದು ಈ ಫಲಿತಾಂಶವನ್ನು ವ್ಯಾಖ್ಯಾನಿಸಿದ್ದಾರೆ. ‘ನಾಗಾ ಪೀಪಲ್ಸ್‌ ಫ್ರಂಟ್‌ ಮತ್ತು ಜೆಡಿಯು ಬೆಂಬಲದೊಂದಿಗೆ ಬಿಜೆಪಿ ಸರ್ಕಾರವನ್ನು ರಚಿಸಲಿದೆ’ ಎಂದೂ ಹೇಳಿದ್ದಾರೆ.

ಮಣಿಪುರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಿವೆ. ಎರಡು ಹಂತದಲ್ಲಿ ನಡೆದಿದ್ದ ಮತದಾನದ ವೇಳೆಯು ಕಚ್ಚಾ ಬಾಂಬ್ ದಾಳಿ, ಗುಂಡಿನ ದಾಳಿ ಸೇರಿದಂತೆ ಹಲವು ಹಿಂಸಾಕೃತ್ಯಗಳು ನಡೆದಿದ್ದವು. ಉಗ್ರಗಾಮಿ ಚಟುವಟಿಕೆಯನ್ನು ಚುನಾವಣಾ ವಿಷಯವಾಗಿಸಿದ್ದ ಬಿಜೆಪಿ, ಮತ್ತೊಂದು ಅವಕಾಶ ಕಲ್ಪಿಸಿದಲ್ಲಿ ರಾಜ್ಯದಲ್ಲಿ ಈ ಪಿಡುಗಿಗೆ ಅಂತ್ಯ ಹಾಡಲಾಗುವುದು ಎಂದು ಭರವಸೆ ನೀಡಿತ್ತು.

‘ಐದು ವರ್ಷಗಳಲ್ಲಿ ಸಾಧಿಸಿದ ಸ್ಥಿರತೆ, ಶಾಂತಿ ವ್ಯವಸ್ಥೆಯನ್ನು ಶಾಶ್ವತಗೊಳಿಸಬೇಕು.25 ವರ್ಷದ ಭವಿಷ್ಯಕ್ಕಾಗಿ ಅಡಿಪಾಯ ಹಾಕಿದ್ದೇವೆ. ಅಭಿವೃದ್ಧಿಗಾಗಿ ಡಬಲ್ ಎಂಜಿನ್‌ ಸರ್ಕಾರ ಬೆಂಬಲಿಸಿ’ ಎಂದು ಪ್ರಧಾನಿ ಮೋದಿ ಕೋರಿದ್ದರು. ಜನತೆ ಅದಕ್ಕೆ ಸಮ್ಮತಿಯ ಮುದ್ರೆ ಒತ್ತಿದಂತಿದೆ.

2017ರಲ್ಲಿ 21ಸ್ಥಾನವನ್ನಷ್ಟೇ ಗೆದ್ದಿದ್ದ ಬಿಜೆಪಿ, ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ನಾಗಾ ಪೀಪಲ್ಸ್‌ ಫ್ರಂಟ್ (ಎನ್‌ಪಿಎಫ್‌) ಬೆಂಬಲದಿಂದ ಸರ್ಕಾರ ರಚಿಸಿತ್ತು. ತದನಂತರ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಪಕ್ಷಾಂತರ ಮಾಡಿದ್ದರು. ಕ್ರಮೇಣ ಬಿಜೆಪಿಯ ಬಲ 28ಕ್ಕೆ ಏರಿತ್ತು. ಆದರೆ, ಐದು ವರ್ಷದಲ್ಲಿ ಬಿಜೆಪಿ ಸಾಕಷ್ಟು ಬೇರೂರಿದ್ದು, ಈ ಚುನಾವಣೆಯಲ್ಲಿ ಸ್ವಂತಬಲದಿಂದ 32 ಸ್ಥಾನ ಗೆದ್ದಿದೆ.

ಎನ್‌.ಬಿರೆನ್‌ ಸಿಂಗ್

ಪಕ್ಷ: ಬಿಜೆಪಿ

ಫಲಿತಾಂಶ: ಗೆಲುವು

ಪಡೆದ ಮತ: 24,814

ಕ್ಷೇತ್ರ: ಹೀಂಗಾಂಗ್‌


ಒ. ಐಬೂಬಿ ಸಿಂಗ್‌:

ಪಕ್ಷ: ಕಾಂಗ್ರೆಸ್

ಫಲಿತಾಂಶ: ಗೆಲುವು

ಪಡೆದ ಮತ: 15,085

ಕ್ಷೇತ್ರ: ತೌಬಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT