ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಸಿಸೋಡಿಯಾಗೆ 14 ದಿನ ನ್ಯಾಯಾಂಗ ಬಂಧನ

Last Updated 6 ಮಾರ್ಚ್ 2023, 18:09 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ವಿಚಾರಣೆಯ ಉದ್ದೇಶದಿಂದ ಸಿಸೋಡಿಯಾ ಅವರನ್ನು 7 ದಿನಗಳ ಮಟ್ಟಿಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಸೋಮವಾರ ಅವರ ಕಸ್ಟಡಿ ಅವಧಿ ಕೊನೆಗೊಂಡಿದ್ದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

‘ಸಿಸೋಡಿಯಾ ಅವರ ವಿಚಾರಣೆ ಪೂರ್ಣಗೊಂಡಿದೆ. ಹೀಗಾಗಿ ಸದ್ಯಕ್ಕೆ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಅಗತ್ಯವಿದ್ದರೆ ಮುಂದೆ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ’ ಎಂದು ಸಿಬಿಐ, ನ್ಯಾಯಾಲಯಕ್ಕೆ ತಿಳಿಸಿತು.

‘ಮತ್ತೆ ವಶಕ್ಕೆ ಪಡೆಯುವ ಅಗತ್ಯ ವಿಲ್ಲ ಎಂದು ಸಿಬಿಐ ಹೇಳಿದೆ. ಹೀಗಾಗಿ ಸಿಸೋಡಿಯಾ ಅವರನ್ನು ಇದೇ 20 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ’ ಎಂದು ವಿಶೇಷ ನ್ಯಾಯಮೂರ್ತಿ ಎಂ.ಕೆ.ನಾಗಪಾಲ್‌ ಅವರು ಆದೇಶಿಸಿದರು.

‘ಭಗವದ್ಗೀತೆ, ಕನ್ನಡಕ, ಔಷಧ ಹಾಗೂ ಇತರ ವಸ್ತುಗಳನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡುವಂತೆ ಆರೋಪಿ ಕೋರಿದ್ದಾರೆ. ‘ವಿ‍‍ಪಷ್ಯನ’ ಧ್ಯಾನ ಕೈಗೊಳ್ಳಲು ಆರೋಪಿಗೆ ಅವಕಾಶ ಮಾಡಿಕೊಡಿ’ ಎಂದು ನ್ಯಾಯಮೂರ್ತಿಯವರು ತಿಹಾರ್‌ ಜೈಲಿನ ಆಡಳಿತಕ್ಕೆ ನಿರ್ದೇಶಿಸಿದರು.

ತಿಹಾರ್‌: ಜೈಲು ಸಂಖ್ಯೆ–1ರಲ್ಲಿ ಸಿಸೋಡಿಯಾ
‘ಸಿಸೋಡಿಯಾ ಅವರನ್ನು ಜೈಲು ಸಂಖ್ಯೆ–1ರಲ್ಲಿ ಇರಿಸಲಾಗಿದೆ’ ಎಂದು ತಿಹಾರ್‌ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

‘ನ್ಯಾಯಾಲಯದ ಆದೇಶದ ಬೆನ್ನಲ್ಲೇ ಸಿಸೋಡಿಯಾ ಅವರನ್ನು ತಿಹಾರ್‌ ಜೈಲಿಗೆ ಕರೆತರಲಾಗಿತ್ತು. ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಜೈಲು ಸಂಖ್ಯೆ–1ಕ್ಕೆ ಕಳುಹಿಸಿಕೊಡಲಾಯಿತು’ ಎಂದಿದ್ದಾರೆ.

‘ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ. ಹೀಗಾಗಿ ನ್ಯಾಯಾಲಯದ ಎದುರು ಎರಡೇ ಆಯ್ಕೆಗಳಿದ್ದವು. ಒಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು. ಇಲ್ಲವೇ ಪೊಲೀಸ್‌ ಕಸ್ಟಡಿ ವಿಸ್ತರಿಸುವುದು. ಸಿಬಿಐ ಬಳಿ ಅಗತ್ಯ ಸಾಕ್ಷ್ಯವೇ ಇಲ್ಲ. ಹೀಗಾಗಿ ಅವರು ಕಸ್ಟಡಿ ಅವಧಿ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಲ್ಲ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ವಕ್ತಾರ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ. ‘ನ್ಯಾಯಾಲಯವು ಇದೇ 10ರಂದು ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ’ ಎಂದೂ ಮಾಹಿತಿ ನೀಡಿದ್ದಾರೆ.

*
ಬಿಜೆಪಿ ವಕ್ತಾರರೊಬ್ಬರು ಸುಳ್ಳು ದಾಖಲೆ ಪ್ರದರ್ಶಿಸಿ, ಅಬಕಾರಿ ನೀತಿಯಲ್ಲಿ ಹಗರಣ ನಡೆದಿರುವುದಾಗಿ ಆರೋಪಿಸಿದ್ದಾರೆ. ಅವರ ಬಳಿ ಇರುವ ದಾಖಲೆಗಳು ನೈಜತೆಯಿಂದ ಕೂಡಿದ್ದರೆ ಅದನ್ನು ಸಿಬಿಐಗೆ ಏಕೆ ಒಪ್ಪಿಸುತ್ತಿಲ್ಲ.
-ಸೌರಭ್‌ ಭಾರದ್ವಾಜ್‌, ಎಎಪಿ ವಕ್ತಾರ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT