ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಪ್ರಕರಣದಲ್ಲಿ ಸಿಸೋಡಿಯಾ ಬಂಧನ ಶೀಘ್ರ: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಗರಂ

Last Updated 2 ಜೂನ್ 2022, 7:37 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಂತೆ ‘ಸುಳ್ಳು’ ಪ್ರಕರಣವೊಂದರಲ್ಲಿ ಉಪ ಮುಖ್ಯಮಂತ್ರಿ ಮನೀಶ್ಸಿಸೋಡಿಯಾ ಅವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಬಿಜೆಪಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೈನ್ ಅವರನ್ನು ಸುಳ್ಳು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಕೆಲವು ತಿಂಗಳ ಹಿಂದೆಯೇ ನನಗೆ ವಿಶ್ವಾಸಾರ್ಹ ಮೂಲಗಳಿಂದ ವಿಷಯ ತಿಳಿದುಬಂದಿತ್ತು. ಇದೀಗ ಮತ್ತೊಂದು ಸುಳ್ಳು ಪ್ರಕರಣದಲ್ಲಿ ಮನೀಷ್‌ ಸಿಸೋಡಿಯಾ ಅವರನ್ನು ಮುಂದಿನ ದಿನಗಳಲ್ಲಿ ಬಂಧಿಸಬಹುದು ಎಂದು ಅದೇ ಮೂಲಗಳಿಂದ ನನಗೆ ಮಾಹಿತಿ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಸಿಸೋಡಿಯಾ ಅವರನ್ನು ‘ದೆಹಲಿಯಲ್ಲಿ ಶಿಕ್ಷಣ ಚಳುವಳಿಯ ಪಿತಾಮಹ’, ‘ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಸಚಿವ’ ಎಂದು ಬಣ್ಣಿಸಿರುವ ಕೇಜ್ರಿವಾಲ್‌, ಸಿಸೋಡಿಯಾ ಅವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವನ್ನು ಸುಧಾರಿಸಲು ಉತ್ತಮ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

‘ಸಿಸೋಡಿಯಾ ಅವರು ದೆಹಲಿಯಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಇರುವ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಭರವಸೆ ಮೂಡಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಲ್ಲಿ ‘ಇವರು ಭ್ರಷ್ಟರಾ’ ಎಂದು ಕೇಳಲು ಬಯಸುತ್ತೇನೆ’ ಎಂದಿದ್ದಾರೆ.

ಸಿಸೋಡಿಯಾ ಮತ್ತು ಜೈನ್ ಉತ್ತಮ ಕಾರ್ಯವೈಖರಿಯಿಂದ ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

‘ನಮ್ಮ ಸರ್ಕಾರದ (ಎಎಪಿ) ಎಲ್ಲಾ ಶಾಸಕರನ್ನು ಒಂದೇ ಬಾರಿಗೆ ಬಂಧಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಒಬ್ಬೊಬ್ಬರನ್ನು ಬಂಧಿಸುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಅಡಚಣೆ ಉಂಟಾಗುತ್ತದೆ’ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಮಂಗಳವಾರ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಸತ್ಯೇಂದ್ರ ಜೈನ್ ಅವರನ್ನು ಜೂನ್ 9ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT