ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರದಲ್ಲಿ ಪ್ರತಿಭಟನೆ: ಯಾಸಿನ್ ಮಲಿಕ್‌ ಪರ ಘೋಷಣೆ ಕೂಗಿದ್ದ 10 ಮಂದಿ ಬಂಧನ

ಅಕ್ಷರ ಗಾತ್ರ

ಶ್ರೀನಗರ: ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಿಷೇಧಿತ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್ ಮಲಿಕ್ ಪರ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿದ್ದ 10 ಮಂದಿಯನ್ನು ಕಾಶ್ಮೀರದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ಯಾಸಿನ್ ಮಲಿಕ್‌ಗೆ ದೆಹಲಿ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಯಾಸಿನ್ ಮಲಿಕ್‌ಗೆ ಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ಆತನ ಬೆಂಬಲಿಗರು ಶ್ರೀನಗರದ ಹಲವೆಡೆ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನಾಕಾರರು ಮತ್ತು ಭದ್ರತಾಪಡೆಗಳ ನಡುವೆ ಘರ್ಷಣೆ ನಡೆದಿತ್ತು. ಹಾಗಾಗಿ ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಇದ್ದ ಸಂದರ್ಭದಲ್ಲಿ ಮೈಸುಮಾ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಲಾಲ್‌ ಚೌಕ್ ಸಮೀಪದ ಮೈಸುಮಾದಲ್ಲಿ ಇರುವ ಮಲಿಕ್ ನಿವಾಸದ ಬಳಿ ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಮಲಿಕ್ ಪರವಾಗಿ ಘೋಷಣೆ ಕೂಗಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರು ಇಡೀ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸುಮಾ ಚೌಕ್‌ ಕಡೆಗೆ ಮೆರವಣಿಗೆ ನಡೆಸಲು ಮುಂದಾದಾಗ, ಭದ್ರತಾ ಪಡೆಗಳ ಜೊತೆ ಸಂಘರ್ಷ ನಡೆದಿತ್ತು.

ಯಾಸಿನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕು ಎಂದು ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಗ್ರಹಿಸಿತ್ತು.

‘ಜಮ್ಮು ಮತ್ತು ಕಾಶ್ಮೀರವನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ಉದ್ದೇಶ ಹೊಂದಿದ್ದ ಅಪರಾಧವು ಗಂಭೀರ ಸ್ವರೂಪದಿಂದ ಕೂಡಿದೆ’ ಎಂದು ಕೋರ್ಟ್ ಹೇಳಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಗಂಭೀರ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಮೇ 19ರಂದು ಮಲಿಕ್ ದೋಷಿ ಎಂದು ಪ್ರಕಟಿಸಿದ್ದ ಕೋರ್ಟ್, ತನ್ನ ವಿರುದ್ಧದ ಆರೋಪವನ್ನು ಒಪ್ಪಿಕೊಳ್ಳುವಂತೆ ಮಲಿಕ್‌ಗೆ ಎರಡು ಬಾರಿ ಅವಕಾಶ ನೀಡಿತ್ತು. ಶಿಕ್ಷೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗುವ ಅವಕಾಶ ಮಲಿಕ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT