ಶನಿವಾರ, ಜೂನ್ 25, 2022
25 °C

ಅಸ್ಸಾಂನಲ್ಲಿ ಪ್ರವಾಹ: 9 ಮಂದಿ ಸಾವು, 27 ಜಿಲ್ಲೆಗಳಲ್ಲಿ 6 ಲಕ್ಷ ಜನರಿಗೆ ಸಂಕಷ್ಟ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಗುವಾಹಟಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಸ್ಸಾಂನಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. 27 ಜಿಲ್ಲೆಗಳಲ್ಲಿ 6 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ 48 ಸಾವಿರಕ್ಕೂ ಹೆಚ್ಚು ಜನರನ್ನು 248 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಸ್ಸಾಂನಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಅಲ್ಪಮಟ್ಟಿಗೆ ಸುಧಾರಿಸಿದ್ದು, ಆದಾಗ್ಯೂ ದಕ್ಷಿಣ ಅಸ್ಸಾಂನಲ್ಲಿ ಮನೆಯಿಂದ ಹೊರಬರದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಓದಿ... ಧಾರಾಕಾರ ಮಳೆ ಮುನ್ಸೂಚನೆ: 7 ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್‌’

ಮಧ್ಯ ಅಸ್ಸಾಂ ಜಿಲ್ಲೆಗಳಾದ ದಿಮಾ ಹಸಾವೊ, ಹೋಜೈ ಮತ್ತು ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ. ಮಳೆ ಮತ್ತು ಭೂಕುಸಿತದಿಂದಾಗಿ ಲುಮ್ಡಿಂಗ್-ಬದರ್‌ಪುರ್ ಪರ್ವತ ವಲಯದ ರೈಲು ಮಾರ್ಗಗಳು, ದಿಮಾ ಹಸಾವೊನಲ್ಲಿ ರೈಲು ಹಳಿಗಳು ಕೊಚ್ಚಿ ಹೋಗಿವೆ. ಇದರಿಂದ ಈ ಪ್ರದೇಶಗಳು ರಾಜ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿದುಕೊಂಡಿವೆ.

ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಹೋಜೈ ಜಿಲ್ಲೆಯೊಂದರಲ್ಲೆ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. 

ಅಸ್ಸಾಂನಲ್ಲಿ ಇನ್ನು ನಾಲ್ಕು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಪ್ರವಾಹ ಪರಿಸ್ಥಿತಿ ಕುರಿತು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. 

₹4 ಲಕ್ಷ ಪರಿಹಾರ: ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹4 ಲಕ್ಷ ಪರಿಹಾರ ನೀಡುವುದಾಗಿ ಅಸ್ಸಾ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು