ಇಂದೋರ್: ನಗರದ ದೇವಸ್ಥಾನವೊಂದರಲ್ಲಿ ಗುರುವಾರ ರಾಮ ನವಮಿ ಉತ್ಸವ ನಡೆಯುತ್ತಿದ್ದ ವೇಳೆ, ಆವರಣದಲ್ಲಿರುವ ಪುರಾತನ ಬಾವಿಯ ಚಾವಣಿ ಕುಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ.
‘ಬಾವಿಯಲ್ಲಿ ಬಿದ್ದವರ ಪೈಕಿ 15ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಇಳೈರಾಜ ತಿಳಿಸಿದ್ದಾರೆ.
ಇಲ್ಲಿನ ಪಟೇಲನಗರದ ಬೇಲೇಶ್ವರ ಮಹಾದೇವ ಝೂಲೇಲಾಲ್ ಎಂಬ ದೇವಸ್ಥಾನದಲ್ಲಿ ಈ ಅವಘಡ ಸಂಭವಿಸಿದೆ. 30–35 ಮಂದಿ ಬಾವಿಯೊಳಗೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ಮಾಹಿತಿ ಉಲ್ಲೇಖಿಸಿ ಪೊಲೀಸ್ ಕಮಿಷನರ್ ಮಕರಂದ್ ದೇವಸ್ಕರ್ ವಿವರ ನೀಡಿದರು.
‘ಹವನ ಸೇರಿದಂತೆ ಧಾರ್ಮಿಕ ವಿಧಿಗಳು ನಡೆಯುತ್ತಿದ್ದವು. ಆಗ, ಬಾವಿಯ ಮೇಲೆ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಜನರ ಭಾರದಿಂದಾಗಿ ಚಾವಣಿ ಕುಸಿಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ದೂರು: ಘಟನೆ ನಂತರ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಿಲ್ಲ. ಅವಘಡ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ಗಂಟೆಯಾದರೂ ಆಂಬುಲೆನ್ಸ್ ಬರಲಿಲ್ಲ ಎಂದು ಪಟೇಲನಗರ ನಿವಾಸಿಗಳ ಸಂಘದ ಅಧ್ಯಕ್ಷ ಕಾಂತಿಭಾಯ್ ಪಟೇಲ್ ಹೇಳಿದ್ದಾರೆ.
‘ಪುರಾತನ ಬಾವಿ ಮೇಲೆ ಸ್ಲ್ಯಾಬ್ ಹಾಕಿ, ಅದರ ಮೇಲೆ ದೇವಸ್ಥಾನ ನಿರ್ಮಿಸಲಾಗಿದೆ’ ಎಂದು ನಿವಾಸಿಗಳು ತಿಳಿಸಿದ್ದಾರೆ.
ಪ್ರಧಾನಿ ಕಳವಳ: ‘ಇಂದೋರ್‌ನಲ್ಲಿ ಸಂಭವಿಸಿರುವ ದುರ್ಘಟನೆಯಿಂದ ನೋವಾಗಿದೆ. ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಜೊತೆ ಮಾತನಾಡಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ರಾಜ್ಯ ಸರ್ಕಾರವು ಕ್ಷಿಪ್ರವಾಗಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ. ಸಂತ್ರಸ್ತರು ಹಾಗೂ ಅವರ ಕುಟುಂಬಗಳ ಸುರಕ್ಷತೆಗಾಗಿ ಪ್ರಾರ್ಥಿಸುವೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.