ಬುಧವಾರ, ಮಾರ್ಚ್ 29, 2023
24 °C
ಪತಿಯ ವಿರುದ್ಧ ವಿವಾಹಿತೆ ಸಲ್ಲಿಸಿದ್ದ ದೂರು

ಮನೆಗೆಲಸ ಮಾಡು ಎನ್ನುವುದು ಕ್ರೌರ್ಯವಲ್ಲ: FIR ರದ್ದು ಮಾಡಿದ ಬಾಂಬೆ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ. ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಹೇಳಿದೆ.

ಪತಿ ಹಾಗೂ ಆತನ ಪೋಷಕರ ವಿರುದ್ಧ ವಿವಾಹಿತೆಯೊಬ್ಬರು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿತ್ತು. ನ್ಯಾಯಮೂರ್ತಿಗಳಾದ ವಿಭಾ ಕಂಕನ್‌ವಾಡಿ ಮತ್ತು ರಾಜೇಶ್‌ ಪಾಟೀಲ್‌ ಅವರು ಈ ಎಫ್‌ಐಆರ್‌ ಅನ್ನು ಅ.21ರಂದು ರದ್ದು ಮಾಡಿದ್ದರು.

‘ಮದುವೆ ಆದ ಒಂದು ತಿಂಗಳವರೆಗೆ ಎಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ನಂತರ, ನನ್ನನ್ನು ಮನೆಗೆಲಸದವಳಂತೆ ಕಾಣತೊಡಗಿದರು. ಜೊತೆಗೆ ಕಾರು ಖರೀದಿಸಲು ₹4 ಲಕ್ಷ ಕೊಡುವಂತೆ ಬೇಡಿಕೆ ಇಟ್ಟರು. ಅದಕ್ಕಾಗಿ ಒತ್ತಾಯಪಡಿಸಿದರು. ಹಣ ನೀಡುವಂತೆ ಪತಿಯು ನನ್ನ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಮಹಿಳೆಯು ದೂರಿನಲ್ಲಿ ಹೇಳಿದ್ದರು. ವಿವಾಹಿತೆಯು ಸದ್ಯ ಪತಿಯೊಂದಿಗೆ ವಾಸವಿಲ್ಲ.

‘ಮಹಿಳೆಯು ದೂರಿನಲ್ಲಿ ದೌರ್ಜನ್ಯವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವು ರೀತಿಯ ದೌರ್ಜನ್ಯವಾಗಿದೆ ಎಂದು ವಿವರಿಸಿಲ್ಲ’ ಎಂದು ನ್ಯಾಯಾಲಯವ ಅಭಿಪ್ರಾಯಪಟ್ಟಿದೆ.

ಮಹಿಳೆಯು ಆಕೆಯ ಪತಿ ಕುರಿತು ಮಾಡಿದ ಆರೋಪವು ಸೆಕ್ಷನ್‌ 498ಎ ಅಡಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು, ಎಫ್‌ಐಆರ್ ರದ್ದು ಮಾಡಬೇಕು ಎಂದು ವಿವಾಹಿತೆಯ ಪತಿ ಮತ್ತು ಆತನ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

ಕೋರ್ಟ್‌ ಹೇಳಿದ್ದೇನು?
* ಮನೆಗೆಲಸ ಮಾಡುವ ಇಚ್ಛೆ ಇಲ್ಲದಿದ್ದರೆ, ಮದುವೆಗೂ ಮೊದಲೇ ಇದನ್ನು ತಿಳಿಸಬೇಕಿತ್ತು. ಆಗ ಮದುವೆಯ ಕುರಿತು ಹುಡುಗ ಮತ್ತು ಆತನ ಮನೆಯವರು ಮತ್ತೊಮ್ಮೆ ಯೋಚಿಸುತ್ತಿದ್ದರು. 

* ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಂದಷ್ಟೇ ಹೇಳಿದರೆ ಸಾಲದು. ಯಾವ ರೀತಿಯ ದೌರ್ಜನ್ಯ ಎಂದು ವಿವರಿಸಬೇಕು.

* ಯಾವ ರೀತಿಯ ಕ್ರಿಯೆ (ಮಹಿಳೆ ಹೇಳುವ ದೌರ್ಜನ್ಯ) ನಡೆದಿದೆ ಎಂದು ವಿವರಿಸದಿದ್ದರೆ, ಪತಿ ನಡೆಸಿದ ಕ್ರಿಯೆಯು ದೌರ್ಜನ್ಯ ಹೌದೊ ಅಲ್ಲವೊ ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು