ಭಾನುವಾರ, ಜೂನ್ 26, 2022
26 °C

ಮಥುರಾ: ಮಸೀದಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರಿ ಕೋರ್ಟ್‌ಗೆ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಥುರಾ: ಕೃಷ್ಣ ಜನ್ಮಸ್ಥಾನ–ಶಾಹಿ ಈದ್ಗಾ ವಿವಾದ ಪ್ರಕರಣದಲ್ಲಿ, ಮಸೀದಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿ ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ.

ಶ್ರೀಕೃಷ್ಣನ ವಂಶಸ್ಥ ಎಂದು ಹೇಳಿಕೊಂಡಿರುವ ಮನೀಶ್ ಯಾದವ್ ಎಂಬುವರು ಮಸೀದಿಯನ್ನು ಸ್ಥಳಾಂತರಿಸಲು ಕೋರಿ ಈ ಮೊದಲು ಅರ್ಜಿ ಸಲ್ಲಿಸಿದ್ದಾರೆ. ಶ್ರೀಕೃಷ್ಣ ವಿರಾಜಮಾನ ಹೆಸರಿನಲ್ಲಿ 2020ರಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳಿಗೆ ಪೂರಕವಾಗಿ ಶನಿವಾರ ಮತ್ತೆ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಕಟ್ರಾ ಕೇಶವದೇವ ದೇವಸ್ಥಾನಕ್ಕೆ ಸೇರಿದ 13.37 ಎಕರೆ ಪ್ರದೇಶದ ಒಂದು ಭಾಗದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂದು ಅರ್ಜಿದಾರರು ಈ ಹಿಂದೆ ಪ್ರತಿಪಾದಿಸಿದ್ದರು. ಈ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಲು ಆಗ್ರಹಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾಯಾಲಯದ ಬೇಸಿಗೆ ರಜೆಯ ಬಳಿಕ, ಜುಲೈ 1ರಂದು ವಿಚಾರಣೆ ಆರಂಭಿಸುವುದಾಗಿ ಕೋರ್ಟ್ ಸಮಯ ನಿಗದಿಪಡಿಸಿತ್ತು.

ಅರ್ಜಿದಾರರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವುದು, ನ್ಯಾಯಾಲಯದಿಂದ ಇಬ್ಬರು ಸಹಾಯಕ ಅಡ್ವೊಕೇಟ್ ಕಮಿಷನರ್‌ಗಳನ್ನು ನೇಮಿಸುವುದು ಹಾಗೂ ಈ ಸಹಾಯಕ ಅಡ್ವೊಕೇಟ್ ಕಮಿಷನರ್‌ಗಳು ಸಮೀಕ್ಷೆ ನಡೆಸುವ ಸಮಯದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಉಪಸ್ಥಿತಿ ಇರುವಂತೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ. 

ಮಸೀದಿಯ ಒಳಗೆ ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ಚಿಹ್ನೆಗಳು ಅಡಗಿವೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಬೇಸಿಗೆ ರಜೆಯ ಕಾರಣಕ್ಕೆ ವಿಳಂಬ ಮಾಡಿದರೆ, ಈ ಕುರುಹುಗಳನ್ನು ವಿರೂಪಗೊಳಿಸುವ ಅಥವಾ ಅವುಗಳನ್ನು ಸ್ಥಳದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದೊಂದೇ ಸದ್ಯಕ್ಕಿರುವ ಪರಿಹಾರ ಎಂದು ಅರ್ಜಿಯಲ್ಲಿ ಕೋರಲಾಗಿದೆ. 

ಸ್ಥಳ ಪರಿಶೀಲನೆ ವೇಳೆ ಹಿರಿಯ ಅಡ್ವೊಕೇಟ್ ಕಮಿಷನರ್‌ಗಳಿಗೆ ಸಹಾಯಕರಾಗಿ ಇಬ್ಬರು ಸಹಾಯಕ ಅಡ್ವೊಕೇಟ್ ಕಮಿನರ್‌ಗಳನ್ನು ನೇಮಿಸಬೇಕು ಎಂದು ಎರಡನೇ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸಮೀಕ್ಷೆಯ ಸಮಯದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಥುರಾ ಮುಖ್ಯ ವೈದ್ಯಕೀಯ ಅಧಿಕಾರಿ ಹಾಗೂ ಮೇಯರ್ ಅವರು ಹಾಜರಿರಲು ಸೂಚಿಸುವಂತೆ ಕೊನೆಯ ಅರ್ಜಿಯಲ್ಲಿ ಆಗ್ರಹಿಸಲಾಗಿದೆ. 

ಮಳಲಿ ಮಸೀದಿಯಲ್ಲಿ ದೈವ ಸಾನ್ನಿಧ್ಯ: ಜ್ಯೋತಿಷಿ

‘ಆಗ್ರಾ ಕೋಟೆ: ನಮಾಜ್ ನಿರ್ಬಂಧಿಸಿ’
ಆಗ್ರಾದ ಪ್ರಸಿದ್ಧ ಕೋಟೆಯಲ್ಲಿರುವ ಬೇಗಂ ಮಸೀದಿಯಲ್ಲಿ ನಮಾಜ್‌ಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಈ ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಹುದುಗಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. 

ಮಹೇಂದ್ರ ಪ್ರತಾಪ್ ಸಿಂಗ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯಲ್ಲಿ ‘ಮೊಘಲ್ ಚಕ್ರವರ್ತಿ ಔರಂಗಜೇಬನು ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇವಾಲಯವನ್ನು ಧ್ವಂಸಗೊಳಿಸಿ, ಪೂಜಾ ವಿಗ್ರಹಗಳನ್ನು ಆಗ್ರಾ ಕೋಟೆಯ ಮಸೀದಿಯಲ್ಲಿ ಮುಚ್ಚಿಹಾಕಿದ್ದಾನೆ’ ಎಂದು ಪ್ರತಿಪಾದಿಸಲಾಗಿದೆ. 

‘ಪ್ರತೀ ದಿನ ನಮಾಜ್‌ ಮಾಡಲು ತೆರಳುವವರು ಈ ಮೆಟ್ಟಿಲುಗಳನ್ನು ಹತ್ತಿ ಮಸೀದಿ ಒಳಗೆ ಹೋಗುತ್ತಾರೆ. ಇದರಿಂದ ಹಿಂದೂಗಳ ಭಾವನೆಗಳಿಗೆ ನೋವಾಗುತ್ತಿದೆ. ಹೀಗಾಗಿ ಪ್ರಾರ್ಥನೆಯನ್ನು ನಿಲ್ಲಿಸಬೇಕು’ ಎಂದು ಮನವಿ ಸಲ್ಲಿಸಲಾಗಿದೆ. ಆದರೆ ಈ ಮನವಿಯನ್ನು ಕೋರ್ಟ್ ಪುರಸ್ಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು