ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮಾಯಾವತಿ–ಅಮಿತ್ ಶಾ ಪರಸ್ಪರ ಹೊಗಳಿಕೆ

ಉತ್ತರ ಪ್ರದೇಶ: ಅತಂತ್ರ ವಿಧಾನಸಭೆ ಏರ್ಪಟ್ಟರೆ ಬಿಜೆಪಿ–ಬಿಎಸ್‌ಪಿ ಮೈತ್ರಿ?
Last Updated 23 ಫೆಬ್ರುವರಿ 2022, 18:36 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರಲು ಕೆಲ ವಾರಗಳು ಬಾಕಿಯಿರುವಾಗ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪರಸ್ಪರ ಪ್ರಶಂಸಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಒಂದು ವೇಳೆ ಅತಂತ್ರ ವಿಧಾನಸಭೆ ಏರ್ಪಟ್ಟರೆ, ಬಿಜೆಪಿ–ಬಿಎಸ್‌ಪಿ ಮೈತ್ರಿಕೂಟ ರಚನೆಯಾಗಲಿದೆ ಎಂಬ ಸುಳಿವಿಗೆ ಉಭಯ ನಾಯಕರ ಮಾತುಗಳು ಪುಷ್ಠಿ ನೀಡಿವೆ. ಜೊತೆಗೆ,ಎರಡನೇ ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಚುನಾವಣೆಯಲ್ಲಿ ದೊಡ್ಡ ಸವಾಲು ಎದುರಾಗಿದೆ ಎಂಬುದನ್ನೂ ಈ ಮಾತುಗಳು ಸೂಚಿಸುತ್ತಿವೆ.

‘ಮಾಯಾವತಿ ಅವರು ಈಗಲೂ ‍ಪ್ರಸ್ತುತ’ರಾಗಿದ್ದಾರೆ ಎಂಬುದಾಗಿ ಸಂದರ್ಶನವೊಂದರಲ್ಲಿ ಅಮಿತ್ ಶಾ ಹೇಳಿದ್ದಕ್ಕೆ ಮಾಯಾವತಿ ಧನ್ಯವಾದ ತಿಳಿಸಿದ್ದಾರೆ. ‘ಬಿಎಸ್‌ಪಿ ಪ್ರಸ್ತುತವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದು ಶಾ ಅವರ ದೊಡ್ಡತನವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಬುಧವಾರ ಮತದಾನ ಮಾಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕೆಲ ದಿನಗಳ ಹಿಂದೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಶಾ, ‘ಈ ಬಾರಿಯ ಚುನಾವಣೆಯಲ್ಲಿ ಬಿಎಸ್‌ಪಿ ದಲಿತರ ಮತಗಳನ್ನು ಪಡೆಯಲಿದೆ. ಆದರೆ, ಈ ಮತಗಳು ಎಷ್ಟು ಕ್ಷೇತ್ರಗಳನ್ನು ಗೆದ್ದುಕೊಡಲಿವೆ ಎಂದು ಹೇಳಲಾರೆ. ಮಾಯಾವತಿ ಅವರು ಪ್ರಚಾರ ಕಣದಲ್ಲಿ ಅಷ್ಟಾಗಿ ಕಾಣಿಸಲಿಲ್ಲ ಎಂದ ಮಾತ್ರಕ್ಕೆ ಅವರನ್ನು ಬೆಂಬಲಿಸುವ ಸಮುದಾಯ ಅವರಿಂದ ವಿಮುಖವಾಗಿದೆ ಎಂದು ಹೇಳಲಾಗದು’ ಎಂದು ಅಭಿಪ್ರಾಯಪಟ್ಟಿದ್ದರು.

ಈ ಮಾತಿಗೆ ಉತ್ತರಿಸಿರುವ ಮಾಯಾವತಿ,‘ಬಿಎಸ್‌ಪಿ ಎಲ್ಲಾ ವರ್ಗಗಳಿಂದ ಮತಗಳನ್ನು ಪಡೆದಿದೆ. ಕೇವಲ ದಲಿತರು, ಮುಸ್ಲಿಮರ ಮತಗಳನ್ನಷ್ಟೇ ಅಲ್ಲದೆ, ಮೇಲ್ಜಾತಿಯವರು ಹಾಗೂ ಹಿಂದುಳಿದ ಜಾತಿಗಳ ಮತಗಳನ್ನೂ ಪಡೆದಿದೆ ಎಂಬ ಅಂಶವನ್ನು ನಾನು ಅವರಿಗೆ ತಿಳಿಸಬಯಸುತ್ತೇನೆ’ ಎಂದಿದ್ದಾರೆ.

403 ಸದಸ್ಯಬಲದ ವಿಧಾನಸಭೆಯಲ್ಲಿ 300 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂಬ ಬಿಜೆಪಿ ಮಾತಿಗೆ ಪ್ರತಿಕ್ರಿಯಿಸಿದ ಮಾಯಾವತಿ, ‘ಯಾರು ಎಷ್ಟು ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ಕಾಲ ನಿರ್ಧರಿಸಲಿದೆ. ಬಿಜೆಪಿ ಅಥವಾ ಎಸ್‌ಪಿ ಬದಲಾಗಿ ಈ ಬಾರಿ ಬಿಎಸ್‌ಪಿ ಬಹುಮತ ಪಡೆಯುವ ಸಾಮರ್ಥ್ಯ ಹೊಂದಿದೆ’ ಎಂದರು.

ಅಖಿಲೇಶ್ ವಿರುದ್ಧ ಕಿಡಿ:ಶಾ ಅವರನ್ನು ಪ್ರಶಂಸಿಸಿದ ಮಾಯಾವತಿ, ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದರು.ಸರ್ಕಾರ ರಚನೆಯ ಕನಸು ಕಾಣುತ್ತಿರುವ ಅಖಿಲೇಶ್ ಯಾದವ್ ಯತ್ನ ಫಲ ಕೊಡುವುದಿಲ್ಲ ಎಂದು ಹೇಳಿದರು. 2007ರ ಚುನಾವಣಾ ಫಲಿತಾಂಶ ಮರುಕಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎಸ್‌ಪಿಯ ಮತಬ್ಯಾಂಕ್ ಎಂದು ಪರಿಗಣಿಸಲಾಗಿರುವ ಮುಸ್ಲಿಮರು ಈ ಬಾರಿ ಅಖಿಲೇಶ್‌ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.ಎಸ್‌ಪಿ ಆಡಳಿತ ವೈಖರಿಯಿಂದ ಅಸಮಾಧಾನಗೊಂಡಿದ್ದ ಅವರನ್ನೂ ಟಿಕೆಟ್ ಹಂಚಿಕೆಯಲ್ಲೂ ನಿರ್ಲಕ್ಷಿಸಲಾಗಿದೆ. ಎಸ್‌ಪಿ ಅವಧಿಯಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರು ಸಾಕಷ್ಟು ಹಿಂಸೆ ಅನುಭವಿಸಿದರು’ ಎಂದು ಮಾಯಾವತಿ ಆರೋಪಿಸಿದ್ದಾರೆ.

ಬಿಎಸ್‌ಪಿ, ಬಿಜೆಪಿ ಮೈತ್ರಿ ಏರ್ಪಟ್ಟರೆ ಆಶ್ಚರ್ಯವಿಲ್ಲ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಸರಳ ಬಹುತಮಕ್ಕೆ ಬೇಕಿರುವ 202 ಸ್ಥಾನಗಳನ್ನು ಪಡೆಯಲು ವಿಫಲವಾದರೆ, ಚುನಾವಣೋತ್ತರ ಮೈತ್ರಿಗೆ ಬಿಜೆಪಿ ಯೋಚಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‌ಪಿ) ಮೈತ್ರಿಯ ಬಾಗಿಲು ತೆರೆಯಲು ಬಿಜೆಪಿ ಇಚ್ಚಿಸಿದೆ ಎನ್ನಲಾಗಿದೆ.

‘ಬಿಜೆಪಿಯ ಸರಳ ಬಹುಮತಕ್ಕೆ ಕೊರತೆಯಾದಲ್ಲಿ, ಬಿಎಸ್‌ಪಿಯಿಂದ ಆ ಸ್ಥಾನಗಳನ್ನು ತುಂಬಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಶಾ ಅವರು ಹೀಗೆ ಮಾತನಾಡಿರುವ ಸಾಧ್ಯತೆಯಿದೆ. ಸ್ವಂತ ಬಲದಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಬಿಜೆಪಿ ಪಡೆಯುವುದು ಕಷ್ಟ ಎಂಬುದು ಅವರಿಗೆ ಮನವರಿಕೆಯಾದಂತಿದೆ’ ಎಂದು ಲಖನೌದ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಬಿಎಸ್‌ಪಿ ಹಾಗೂ ಬಿಜೆಪಿ ಸೇರಿಕೊಂಡು ಮೂರು ಬಾರಿ ಸರ್ಕಾರ ರಚಿಸಿವೆ. ಹೀಗಾಗಿ ಮಾಯಾವತಿ ಹಾಗೂ ಶಾ ಅವರು ಪರಸ್ಪರ ಹೊಗಳಿಕೊಂಡಿರುವುದು ಹಾಗೂ ಚುನಾವಣೋತ್ತರ ಮೈತ್ರಿ ಮಾಡುಕೊಳ್ಳುವುದು ಅಚ್ಚರಿಯ ವಿದ್ಯಮಾನವೇನಲ್ಲ ಎಂದು ಮತ್ತೊಬ್ಬ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಒಳಗೇ ಆಕ್ಷೇಪ

ಚುನಾವಣೆಯ ಮೂರು ಹಂತಗಳು ಬಾಕಿಯಿರುವಾಗ ಶಾ ಅವರು ಈ ಮಾತು ಹೇಳಿದ್ದು ಸರಿಯಲ್ಲ ಎಂಬ ಅಭಿಪ್ರಾಯವು ಉತ್ತರ ಪ್ರದೇಶಬಿಜೆಪಿ ಘಟಕದ ಒಂದು ವಲಯದಿಂದ ವ್ಯಕ್ತವಾಗಿದೆ.

‘ಶಾ ಅವರ ಮಾತಿನಿಂದ ಬಿಎಸ್‌ಪಿ ಕಾರ್ಯಕರ್ತರಲ್ಲಿ ಹುರುಪು ಹೆಚ್ಚುತ್ತದೆ. ಇದರಿಂದ ಬಿಎಸ್‌ಪಿ ಮತಗಳು ಹೆಚ್ಚಾಗಿ, ಎಸ್‌ಪಿಗೆ ಹೊಡೆತ ನೀಡುವುದರ ಜೊತೆಗೆ ಬಿಜೆಪಿಗೂ ಹೊಡೆತ ಬೀಳಲಿದೆ. ಮೇಲ್ಜಾತಿಯವರು ಅದರಲ್ಲೂ ಬ್ರಾಹ್ಮಣರು ಬಿಎಸ್‌ಪಿಯತ್ತ ಹೊರಳುವ ಸಾಧ್ಯತೆಯಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಶಾ ಹಾಗೂ ಮಾಯಾವತಿ ಮಾತುಗಳಿಂದ ಎಸ್‌ಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅಚ್ಚರಿಯೇನೂ ಆಗಿಲ್ಲ. ‘ಬಿಜೆಪಿ–ಬಿಎಸ್‌ಪಿ ನಡುವೆ ಒಂದು ರೀತಿಯ ಹೊಂದಾಣಿಕೆ ಇದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆವು. ಅದು ಈಗ ನಿಜವಾಗಿದೆ’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT