ಶುಕ್ರವಾರ, ಮೇ 27, 2022
30 °C
ಕಳಪೆ ವಜ್ರ ಅಡ ಇಟ್ಟು ಸಾಲ l ಹೊಸ ಪ್ರಕರಣ ದಾಖಲಿಸಿಕೊಂಡ ಸಿಬಿಐ

‘ಗಿರವಿ: ₹25 ಕೋಟಿ ಸಾಲ ಪಡೆದಿದ್ದ ಚೋಕ್ಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಸೋಮವಾರ ಹೊಸ ಪ್ರಕರಣ ದಾಖಲಿಸಿದೆ. ಹೆಚ್ಚಿನ ಮೌಲ್ಯವುಳ್ಳದ್ದು ಎಂದು ನಂಬಿಸಿ ವಜ್ರ ಹಾಗೂ ಚಿನ್ನಾಭರಣಗಳನ್ನು ಗಿರವಿ ಇಟ್ಟು, ಭಾರತೀಯ ಕೈಗಾರಿಕಾ ಹಣಕಾಸು ನಿಗಮದಿಂದ (ಐಎಫ್‌ಸಿಐ) ₹25 ಕೋಟಿ ಸಾಲ ಪಡೆದಿದ್ದಾರೆ ಎಂದು ಚೋಕ್ಸಿ ವಿರುದ್ಧ ಆರೋಪ ಹೊರಿಸಲಾಗಿದೆ. 

ಚೋಕ್ಸಿ ಹಾಗೂ ಅವರ ಗೀತಾಂಜಲಿ ಜೆಮ್ಸ್ ಕಂಪನಿ, ಆಭರಣಗಳ ಮೌಲ್ಯಮಾಪನ ಮಾಡಿದ್ದ ಸುರಾಜ್‌ಮಲ್ ಲಲ್ಲು ಭಾಯ್ ಅಂಡ್ ಕಂಪನಿ, ನರೇಂದ್ರ ಝಾವೇರಿ, ‌ಪ್ರದೀಪ್ ಶಾ ಮತ್ತು ಶ್ರೇಣಿಕ್ ಶಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಐಎಫ್‌ಸಿಐ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಕ್ರಮ ತೆಗೆದುಕೊಂಡಿದೆ. ಕಾರ್ಯಾಚರಣೆ ಬಂಡವಾಳ ಸಾಲವಾಗಿ ₹25 ಕೋಟಿ ನೀಡುವಂತೆ 2016ರಲ್ಲಿ ಸಂಸ್ಥೆಯನ್ನು ಚೋಕ್ಸಿ ಸಂಪರ್ಕಿಸಿದ್ದರು. ಈ ಸಾಲಕ್ಕೆ ಷೇರು ಹಾಗೂ ಚಿನ್ನ, ವಜ್ರಾಭರಣಗಳನ್ನು ಅವರು ಗಿರವಿ ಇಟ್ಟಿದ್ದರು. ಈ ಆಭರಣಗಳ ಮೌಲ್ಯ ₹34–₹45 ಕೋಟಿ ಎಂದು ನಾಲ್ವರು ಚಿನ್ನಾಭರಣ ಮೌಲ್ಯಮಾಪಕರು ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವರದಿ ಆಧರಿಸಿ ಐಸಿಎಫ್‌ಐ ಸಾಲ ಮಂಜೂರು ಮಾಡಿತ್ತು. 

ಚೋಕ್ಸಿ ಅವರ ಕಂಪನಿ ಸರಿಯಾಗಿ ಮರು ಪಾವತಿ ಮಾಡದ ಕಾರಣ, 2018ರಲ್ಲಿ ಅವರ ಸಾಲ ಎನ್‌ಪಿಎ (ವಸೂಲಾಗದ ಸಾಲ) ಆಗಿತ್ತು. ಇದರಿಂದ ಐಎಫ್‌ಸಿಐಗೆ ₹22 ಕೋಟಿ ನಷ್ಟ ಉಂಟಾಗಿತ್ತು. ಹೀಗಾಗಿ, ಚೋಕ್ಸಿ ಗಿರವಿ ಇಟ್ಟಿದ್ದ ಷೇರು ಹಾಗೂ ಚಿನ್ನಾಭರಣಗಳನ್ನು ಮಾರಾಟ ಮಾಡಲು ಸಂಸ್ಥೆ ಮುಂದಾಯಿತು. ಆದರೆ, ₹4.07 ಕೋಟಿ ಮೌಲ್ಯದ 6,48,822 ಷೇರುಗಳನ್ನು ಮಾರಾಟ ಮಾಡಲಷ್ಟೇ ಸಾಧ್ಯವಾಯಿತು. ಚೋಕ್ಸಿ ಅವರ ಗ್ರಾಹಕ ಗುರುತುಪತ್ರವನ್ನು ಎನ್‌ಎಸ್‌ಡಿಎಲ್ ಸ್ಥಗಿತಗೊಳಿಸಿದ್ದ ಕಾರಣ, ಉಳಿದ ಷೇರುಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

ಚೋಕ್ಸಿ ಇರಿಸಿದ್ದ ಚಿನ್ನ ಹಾಗೂ ವಜ್ರದ ಆಭರಣಗಳತ್ತ ನಿಗಮ ಗಮನ ಹರಿಸಿತು. ಆದರೆ ಹೊಸದಾಗಿ ಅವುಗಳನ್ನು ಮೌಲ್ಯಮಾಪನ ಮಾಡಿದವರ ಪ್ರಕಾರ, ಚಿನ್ನ ಹಾಗೂ ವಜ್ರದ ಆಭರಣಗಳು ಸಾಲ ಪಡೆಯುವಾಗ ಸಲ್ಲಿಸಿದ್ದ ಮೂಲ ವರದಿಗಳಲ್ಲಿ ಉಲ್ಲೇಖಿಸಿದ್ದಕ್ಕಿಂತ ಶೇ 98ರಷ್ಟು ಕಡಿಮೆ ಮೌಲ್ಯ ಹೊಂದಿದ್ದವು. ಹೊಸ ಮೌಲ್ಯಮಾಪನದಲ್ಲಿ ಚಿನ್ನಾಭರಣಗಳ ಮೌಲ್ಯ ₹70 ಲಕ್ಷದಿಂದ ₹2 ಕೋಟಿ ಎಂದು
ತಿಳಿದುಬಂದಿತು. 

ಚಿನ್ನಾಭರಣ ಮೌಲ್ಯಮಾಪನ ಮಾಡಿದವರಿಗೆ ಸೇರಿದ ಕೋಲ್ಕತ್ತ, ಮುಂಬೈನ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದ ಸಿಬಿಐ, ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಎಂದು ಸಿಬಿಐ ವಕ್ತಾರ ಆರ್‌.ಸಿ ಜೋಷಿ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು