ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕನಿಗೆ ಗನ್‌ ತೋರಿಸಿ ಬೆದರಿಕೆ

ಶಿವಸೇನಾ ಕಾರ್ಯಕರ್ತರಿಂದ ಕೃತ್ಯ ಎಂದು ಆರೋಪಿಸಿದ ಎಐಎಂಐಎಂ ಸಂಸದ
Last Updated 30 ಜನವರಿ 2021, 11:03 IST
ಅಕ್ಷರ ಗಾತ್ರ

ಮುಂಬೈ: ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಮ್ಮ ವಾಹನ ಮುಂದಕ್ಕೆ ಹೋಗಲು ಅಡ್ಡಿಯಾದ ಟ್ರಕ್‌ ಚಾಲಕನತ್ತ ಗನ್‌ ತೋರಿಸುತ್ತಿರುವ ವಿಡಿಯೊವೊಂದನ್ನು ಎಐಎಂಐಎಂ ಪಕ್ಷದ ಸಂಸದ ಇಮ್ತಿಯಾಜ್‌ ಜಲೀಲ್‌ ಅವರು ಟ್ವೀಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡುತ್ತಿದ್ದಂತೆಯೇ ಪೊಲೀಸರು ಈ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನವನ್ನು ಹಾಗೂ ಅದರಲ್ಲಿದ್ದವನ್ನು ಪತ್ತೆಹಚ್ಚುವ ಶೋಧ ಆರಂಭವಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ‘ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರೂ ಶಿವಸೇನಾಗೆ ಸೇರಿದವರು’ ಎಂದು ಜಲೀಲ್‌ ಹೇಳಿದ್ದಾರೆ.

‘ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ! ವಾಹನದ ಮೇಲಿರುವ ಲೊಗೊ ಎಲ್ಲವನ್ನೂ ಹೇಳುತ್ತದೆ. ತಮ್ಮ ವಾಹನ ಮುಂದಕ್ಕೆ ಹೋಗಲು ಶಿವಸೈನಿಕರು ತಮ್ಮ ರಿವಾಲ್ವರ್‌ಗಳನ್ನು ಝಳಪಿಸುತ್ತಿದ್ದಾರೆ. ಗೃಹ ಸಚಿವರು, ಪೊಲೀಸ್‌ ಮಹಾನಿರ್ದೇಶಕರು ಈ ಘಟನೆಯನ್ನು ಗಮನಿಸುತ್ತಾರೆಯೇ’ ಎಂದು ಜಲೀಲ್‌ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ಕಿಟಕಿಯಿಂದ ಗನ್‌ ಹೊರಹಾಕಿರುವುದು ದೃಶ್ಯದಲ್ಲಿದೆ. ಕಾರಿನ ಹಿಂಭಾಗದ ಗಾಜಿನಲ್ಲಿ ಗುರುಗುಟ್ಟುವ ಹುಲಿಯ ಮುಖವಿದೆ. ಇದು ಶಿವಸೇನಾದ ಲಾಂಛನವಾಗಿದೆ. ಈ ಟ್ವೀಟ್‌ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕಚೇರಿಯನ್ನೂ ಜಲೀಲ್‌ ಟ್ಯಾಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT