ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಲೀಕರಿಗೆ ನಾಲ್ಕು ಪಟ್ಟು ಪರಿಹಾರ

3 ತಿಂಗಳಲ್ಲಿ ತಲಾ ₹ 30 ಲಕ್ಷ ಪಾವತಿಗೆ ಅರ್ಸೆಲರ್‌ ಮಿತ್ತಲ್‌ ಕಂಪನಿಗೆ ‘ಸುಪ್ರೀಂ’ ಆದೇಶ
Last Updated 5 ಫೆಬ್ರುವರಿ 2023, 21:12 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) 2010ರಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಘಟಕ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಪ್ರತಿ ಎಕರೆಗೆ ಅಲ್ಲಿನ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ನಿಗದಿಪಡಿಸಿದಷ್ಟು ಪರಿಹಾರವನ್ನೇ ಅರ್ಸೆಲರ್‌ ಮಿತ್ತಲ್‌ ಇಂಡಿಯಾ ಕಂಪನಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶದ ಪ್ರಕಾರ ಪ್ರತಿ ಎಕರೆಗೆ ಈಗ ನೀಡಬೇಕಿರುವ ಪರಿಹಾರ ಮೊತ್ತ ₹ 30.20 ಲಕ್ಷ.

ಭೂ ಸಂತ್ರಸ್ತ ಬಿ.ರವಿಪ್ರಕಾಶ್‌ ಹಾಗೂ ಇತರ 83 ಮಂದಿ ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಹಾಗೂ ಅಭಯ್‌ ಎಸ್‌.ಓಕಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ಆದೇಶವನ್ನು ರದ್ದುಪಡಿಸಿದೆ. ಜತೆಗೆ, ಮೂರು ತಿಂಗಳಲ್ಲಿ ಪರಿಹಾರ ಪಾವತಿಸಬೇಕು ಎಂದೂ ತಾಕೀತು ಮಾಡಿದೆ.

ಬಳ್ಳಾರಿ ಜಿಲ್ಲೆಯ ಕುಡಿತಿನಿ ಹಾಗೂ ಹರಗಿನಡೋಣಿ ಗ್ರಾಮಗಳಲ್ಲಿ ಕೈಗಾರಿಕೆ ಸ್ಥಾಪಿಸಲು 4,993 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು 2010ರ ಫೆಬ್ರುವರಿ 5ರಂದು ಕೆಎಐಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 4,866 ಎಕರೆ ಭೂಸ್ವಾಧೀನಕ್ಕೆ 2010ರ ಮೇ ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಭೂಮಿ ಕಳೆದುಕೊಳ್ಳುವವರಿಗೆ ಪ್ರತಿ ಎಕರೆಗೆ ₹1.5 ಲಕ್ಷ ನೀಡಲು ವಿಶೇಷ ಭೂಸ್ವಾಧೀನ ಅಧಿಕಾರಿ ಶಿಫಾರಸು ಮಾಡಿದ್ದರು.

ಆದರೆ, ಅವೈಜ್ಞಾನಿಕ ದರ ನಿಗದಿ ಮಾಡಲಾಗಿದೆ ಎಂದು ಭೂ ಸಂತ್ರಸ್ತರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಹೋರಾಟ ನಡೆಸಿದ್ದರು. ಬಳಿಕ ಕೃಷಿ ಭೂಮಿಗೆ ಎಕರೆಗೆ ₹8 ಲಕ್ಷ, ಕೃಷಿಯೇತರ ಭೂಮಿಗೆ ಎಕರೆಗೆ ₹12 ಲಕ್ಷ ನಿಗದಿಪಡಿಸಲಾಗಿತ್ತು. ಈ ಭೂ ದರವನ್ನು ಕೆಲವು ಭೂ ಮಾಲೀಕರು ಒಪ್ಪಿಕೊಂಡು ಭೂಮಿ ಬಿಟ್ಟುಕೊಡಲು ಕೆಐಎಡಿಬಿ ಜತೆಗೆ ಕರಾರು ಮಾಡಿಕೊಂಡಿದ್ದರು. ಕಡಿಮೆ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಹಲವು ಭೂಮಿ ಮಾಲೀಕರು ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ನಷ್ಟು ದೂರದಲ್ಲಿರುವ ಭೂಮಿಗೆ ₹32.20 ಲಕ್ಷ ಹಾಗೂ ಅದರ ಆಚೆಗೆ ಇರುವ ಕೃಷಿ ಭೂಮಿಗೆ ₹8 ಲಕ್ಷ ಪರಿಹಾರ ನೀಡಬೇಕು ಎಂದು 2016ರ ಮಾರ್ಚ್‌ 1ರಂದು ಆದೇಶ ನೀಡಿತ್ತು.

‘ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿಯವರನ್ನು ಮಾತ್ರ ಪ್ರತಿ
ವಾದಿಯನ್ನಾಗಿ ಮಾಡಲಾಗಿದೆ. ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ’ ಎಂದು ಆಕ್ಷೇಪಿಸಿ ಕೆಐಎಡಿಬಿ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಳ್ಳಾರಿ ನ್ಯಾಯಾಲಯದ ಆದೇಶವನ್ನು 2018ರಲ್ಲಿ ರದ್ದುಪಡಿಸಿದ ಹೈಕೋರ್ಟ್, ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಿಕೊಂಡು ‍ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಬಿ.ರವಿಪ್ರಕಾಶ್‌ ಹಾಗೂ ಇತರರು 2018ರಲ್ಲಿ ವಿಶೇಷ ಮೇಲ್ಮನವಿ ಅರ್ಜಿ
ಸಲ್ಲಿಸಿದ್ದರು. 2023ರ ಜನವರಿ 31ರಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ‘ಈ ಪ್ರಕರಣ
ದಲ್ಲಿ ಸರ್ಕಾರದ ಲಾಭಕ್ಕಾಗಿ ಭೂಸ್ವಾಧೀನ ಮಾಡುತ್ತಿಲ್ಲ. ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ ಮಾಡಲು ಅರ್ಸೆಲರ್‌ ಮಿತ್ತಲ್‌ ಹಾಗೂ ಕೆಐಎಡಿಬಿ ಒಪ್ಪಂದ ಮಾಡಿಕೊಂಡಿವೆ. ಪರಿಹಾರದ ಮೊತ್ತವನ್ನು ಕಂಪನಿ ಪಾವತಿಸಬೇಕಿದೆ. ವಿಶೇಷ ಭೂಸ್ವಾಧೀನ ಅಧಿಕಾರಿಯವರು ದಾಖಲೆಗಳ ಪರಿಶೀಲನೆ ನಡೆಸಿ ಪ್ರಕ್ರಿಯೆ ನಡೆಸಿದ್ದಾರೆ. ಇಲ್ಲಿ ಮಂಡಳಿಯ ಪಾತ್ರ ಏನಿಲ್ಲ. ಹೀಗಾಗಿ, ಮಂಡಳಿಯನ್ನು ಪ್ರತಿ
ವಾದಿಯನ್ನಾಗಿ ಮಾಡಬೇಕು ಎಂಬ ಹೈಕೋರ್ಟ್‌ ವ್ಯಾಖ್ಯಾನ ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

‘ರೈತರ ಹೋರಾಟಕ್ಕೆ ಜಯ’

‘ಕೆಎಐಡಿಬಿ ಫಲವತ್ತಾದ ಭೂಮಿಗೆ ಅವೈಜ್ಞಾನಿಕ ದರವನ್ನು ನಿಗದಿ ಮಾಡಿತ್ತು. ಹಲವು ರೈತರು ಇದನ್ನು ಒಪ್ಪಿಕೊಂಡರು. ಪರಿಹಾರ ನಿಗದಿಯ ಅನ್ಯಾಯದ ವಿರುದ್ಧ ಹಲವು ಮಂದಿ ಧ್ವನಿ ಎತ್ತಿ ಹೋರಾಟ ಮಾಡಿದೆವು. ನಮ್ಮ 289 ಎಕರೆ ಜಾಗಕ್ಕೆ ಬಳ್ಳಾರಿ ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರ ಸಿಗಬೇಕು. ಅಧೀನ ನ್ಯಾಯಾಲಯಗಳಲ್ಲಿ ಇನ್ನಷ್ಟು ಜನರು (179 ಎಕರೆ ಜಾಗಕ್ಕೆ ಸಂಬಂಧಪಟ್ಟಂತೆ) ದಾವೆ ಹೂಡಿದ್ದಾರೆ. ನಮ್ಮ ಹೋರಾಟದಿಂದ ಅವರಿಗೂ ಅನುಕೂಲವಾಗಬಹುದು. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಎನ್‌ಎಂಡಿಸಿಗೆ 3,800 ಎಕರೆ ಹಾಗೂ ಉತ್ತಮ್‌ ಗಾಲ್ವ ಸ್ಟೀಲ್ಸ್‌ ಕಂಪನಿಗೆ 5,000 ಎಕರೆ ಭೂಸ್ವಾಧೀನ ಮಾಡಲಾಗುತ್ತಿದೆ. ಭೂ ದರ ನಿಗದಿ ಪ್ರಶ್ನಿಸಿ ಅನೇಕ ಮಂದಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅವರಿಗೆ ಸಹ ಈ ಆದೇಶದಿಂದ ಲಾಭ ಆಗಬಹುದು. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಅರ್ಜಿದಾರ ಬಿ.ರವಿಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT