ಶನಿವಾರ, ಸೆಪ್ಟೆಂಬರ್ 26, 2020
21 °C
ಮಲಯಾಳಂ, ಇಂಗ್ಲಿಷ್‌ನಲ್ಲಿ ಎರಡು ಕವನ ಸಂಕಲಗಳೂ ಪ್ರಕಟ

’ಲಾಕ್‌ಡೌನ್’ನಲ್ಲಿ 13 ಕೃತಿಗಳನ್ನು ಬರೆದ ಮಿಜೋರಾಂ ರಾಜ್ಯಪಾಲರು!

ಪಿಟಿಐ Updated:

ಅಕ್ಷರ ಗಾತ್ರ : | |

ಐಜ್ವಾಲ: ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ತುಂಬಾ ಸಿನಿಮಾ ನೋಡಿದವರಿದ್ದಾರೆ, ಪುಸ್ತಕಗಳನ್ನು ಓದಿದವರಿದ್ದಾರೆ. ಕಥೆ ಹೇಳಿದವರು, ಕಥೆ ಕೇಳಿದವರು, ಹಾಡು ಹೇಳಿದವರು, ತೋಟ ಮಾಡಿದವರು.. ಹೀಗೆ ವೈವಿಧ್ಯಮಯ ಕೆಲಸಗಳಲ್ಲಿ ತೊಡಗಿಸಿಕೊಂಡವರಿದ್ದಾರೆ.

ವಿಶೇಷ ಎಂದರೆ, ಮಿಜೋರಾಂ ರಾಜ್ಯದ ರಾಜ್ಯಪಾಲ ಪಿ.ಎಸ್‌.ಶ್ರೀಧರನ್ ಪಿಳ್ಳೈ ಅವರು ಲಾಕ್‌ಡೌನ್ ಅವಧಿಯಲ್ಲಿ 13 ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಇಂಗ್ಲಿಷ್‌ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಪದ್ಯಗಳ ಸಂಗ್ರಹದ ಕೃತಿಗಳೂ ಸೇರಿವೆ !

ಮಾರ್ಚ್‌ನಿಂದಲೇ ಆರಂಭ

ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್ ಆರಂಭವಾಯಿತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಸೇರಿದಂತೆ ಎಲ್ಲರಿಗೂ ರಾಜಭವನ ಪ್ರವೇಶವನ್ನು ನಿಷೇಧಿಸಲಾಯಿತು. ಕೆಲವು ದಿನಗಳ ಕಾಲ ರಾಜ್ಯಪಾಲರು ತಮ್ಮ ಪ್ರವಾಸ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿದರು. ಈ ಕಾರಣಗಳಿಂದಾಗಿ ಓದುವುದಕ್ಕೆ ಪುಸ್ತಕಗಳನ್ನು ಬರೆಯುವುದಕ್ಕೆ ಹೆಚ್ಚು ಸಮಯ ಸಿಕ್ಕಿತು ಎನ್ನುತ್ತಾರೆ ಪಿಳ್ಳೈ ಅವರು.

‘ಪ್ರತಿದಿನ ಮುಂಜಾನೆ 4 ಗಂಟೆ ಏಳುತ್ತಿದ್ದೆ. ವ್ಯಾಯಾಮದ ನಂತರ ಓದು– ಬರೆಯಲು ಶುರು ಮಾಡುತ್ತಿದ್ದೆ. ನಂತರ ಕಚೇರಿ ಕೆಲಸ. ಆ ಕೆಲಸ ಮುಗಿದ ನಂತರ ಮತ್ತೆ ರೀಡಿಂಗ್‌ ರೂಮ್‌ನಲ್ಲಿ  ಓದು– ಬರಹ ಮುಂದುವರಿಯುತ್ತಿತ್ತು. ಈ ಅಭ್ಯಾಸ ನಿರಂತರವಾಗಿ ಮುಂದುವರಿಯಿತು’ ಎಂದು ಹೇಳಿದರು.

ಕೊರೊನಾ ವೈರಸ್‌ ಜನರಿಗೆ ಮನುಷ್ಯತ್ವದ ಪಾಠ ಹೇಳಿದೆ. ಒಬ್ಬರ ಮೇಲೊಬ್ಬರು ಹೇಗೆ ಅವಲಂಬಿತರಾಗಿದ್ದೇವೆಂದು ತಿಳಿಸಿದೆ. ಮಾತ್ರವಲ್ಲ, ವ್ಯಕ್ತಿಗಳ ನಡುವಿರುವ ಪ್ರೀತಿ ಮತ್ತು ಬಾಂಧವ್ಯವನ್ನು ವೃದ್ಧಿಸಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.

ಮಲೆಯಾಳಂನ ’ಕೊರೊನಾ ಕವಿತಗಳ್‌’ ಕವಿತೆ ಸೇರಿದಂತೆ, ಅವರು ಬರೆದಿರುವ ಹತ್ತು ಕವಿತೆಗಳಲ್ಲಿ ಬಹುತೇಕವು ’ಕೋವಿಡ್‌ 19’ಗೆ ಸಂಬಂಧಪಟ್ಟಿವೆಯಂತೆ. ಇನ್ನೊಂದು ಕವನ ಸಂಕಲನ ’ಓ ಮಿಜೋರಾಂ’. ಇದರಲ್ಲಿರುವ ಪ್ರತಿ ಕವಿತೆಯಲ್ಲೂ ಈಶಾನ್ಯ ರಾಜ್ಯಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಲಾಗಿದೆ.

‌1983ರಿಂದ ಪುಸ್ತಕ ಬರೆಯುವ ಹವ್ಯಾಸ

ಪಿಳ್ಳೈ ಅವರು 1983ರಿಂದ ಪುಸ್ತಕ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ರಾಜ್ಯಪಾಲರಾಗುವ ಮುನ್ನ ಸುಮಾರು 105 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಲ್ಲಿವರೆಗೂ ಕವನ ಸಂಕಲನವೂ ಸೇರಿದಂತೆ, ವಿವಿಧ ವಿಷಯಗಳ ಸುಮಾರು 121 ಕೃತಿಗಳನ್ನು ರಚಿಸಿದ್ದಾರೆ. ಸದ್ಯ ನಾಲ್ಕು ಪುಸ್ತಕಗಳನ್ನು ಬರೆಯುತ್ತಿದ್ದು, ಪ್ರಕಟಣೆಯ ಹಂತದಲ್ಲಿವೆ.

ಕಳೆದ ಶನಿವಾರ ಮಿಜೋರಾಂ ಮುಖ್ಯಮಂತ್ರಿ ಝೊರಾಮಾತಂಗ್ ಅವರು ರಾಜ್ಯಪಾಲರ ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ ದಿನ ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿ ಅಜಯ್‌ ಲಂಬಾ ಅವರು, ಪಿಳ್ಳೈ ಅವರ ’ರಿಪಬ್ಲಿಕ್ ಡೇ 2020 ಮತ್ತು ದಸ್ ಸ್ಪೀಕ್ಸ್‌ ದಿ ಗವರ್ನರ್ ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ ಕೇರಳದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಪಿಳ್ಳೈ, ಕಳೆದ ವರ್ಷ ನವೆಂಬರ್ 5ರಂದು ಮಿಜೋರಾಂ ರಾಜ್ಯದ 21ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು