ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗಾಬಾದ್: ಕಲ್ಲು ತೂರಾಟ– 10 ಪೊಲೀಸರಿಗೆ ಗಾಯ

ಎರಡು ಗುಂಪುಗಳ ಮಧ್ಯೆ ಘರ್ಷಣೆ: ಪೆಟ್ರೋಲ್‌ ತುಂಬಿದ್ದ ಬಾಟಲಿ ಎಸೆದ ದುಷ್ಕರ್ಮಿಗಳು
Last Updated 30 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಔರಂಗಾಬಾದ್, ಮಹಾರಾಷ್ಟ್ರ: ಔರಂಗಾಬಾದ್ ನಗರದ ಕಿರಾಡಪುರ ಪ್ರದೇಶದಲ್ಲಿನ ರಾಮಮಂದಿರ ಸಮೀಪ ಕೆಲ ಯುವಕರ ಮಧ್ಯೆ ಘರ್ಷಣೆ ನಡೆದಿದೆ. ನಂತರ 500ರಷ್ಟು ಜನರಿದ್ದ ಗುಂಪು ಕಲ್ಲು ತೂರಾಟ, ಪೆಟ್ರೋಲ್‌ ತುಂಬಿದ ಬಾಟಲಿಗಳನ್ನು ಎಸೆದಿದ್ದು, ಈ ಘಟನೆಯಲ್ಲಿ 10 ಪೊಲೀಸರು ಸೇರಿ 12 ಮಂದಿ ಗಾಯಗೊಂಡಿದ್ದಾರೆ.

13 ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ಬುಧವಾರ ರಾತ್ರಿ ತಲಾ ಐದು ಜನರಿದ್ದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ನಂತರ, ಒಂದು ಗುಂಪು ಜಾಗ ತೊರೆದಿದೆ. ಒಂದು ಗಂಟೆ ಬಳಿಕ ಬಹಳಷ್ಟು ಜನರಿದ್ದ ಮತ್ತೊಂದು ಗುಂಪು ಸ್ಥಳಕ್ಕೆ ಬಂತು. ಕಲ್ಲುಗಳು, ಪೆಟ್ರೋಲ್‌ ತುಂಬಿದ್ದ ಬಾಟಲಿಗಳನ್ನು ತಂದಿದ್ದ ಗುಂಪು, ಅವುಗಳನ್ನು ಪೊಲೀಸರತ್ತ ಎಸೆಯಿತು’ ಎಂದು ಪೊಲೀಸ್‌ ಕಮಿಷನರ್ ನಿಖಿಲ್ ಗುಪ್ತ ತಿಳಿಸಿದ್ದಾರೆ.

ದುಷ್ಕರ್ಮಿಗಳು ಬೀದಿದೀಪಗಳನ್ನು ನಾಶ ಮಾಡಿದ್ದರಿಂದ ಸ್ಥಳದಲ್ಲಿ ಕತ್ತಲು ಆವರಿಸಿತ್ತು. ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು, ಗುಂಪನ್ನು ಚದುರಿಸಬೇಕಾಯಿತು ಎಂದೂ ಅವರು ಹೇಳಿದ್ದಾರೆ.

‘ದಾಳಿ ನಡೆಸಿದವರ ಪತ್ತೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ಶಾಂತಿ–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಂಡಿದ್ದು, ನಗರದಲ್ಲಿ ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಹರಿದಾಡಿದ ವಿಡಿಯೊ: ದಾಳಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಿಜೆಪಿ ಮುಖಂಡ ಹಾಗೂ ಸಚಿವ ಅತುಲ್‌ ಸಾವೆ, ಎಐಎಂಐಎಂ ಸಂಸದ ಇಮ್ತಿಯಾಜ್‌ ಜಲೀಲ್‌ ಅವರು ಗುಂಪನ್ನು ಸಮಾಧಾನಗೊಳಿಸುವ ಮೂಲಕ ಶಾಂತಿ ಕಾಪಾಡಲು ಯತ್ನಿಸುತ್ತಿದ್ದ ದೃಶ್ಯಗಳು ವಿಡಿಯೊದಲ್ಲಿವೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ಜಲೀಲ್‌, ‘ರಾಮ ಮಂದಿರ ಸುರಕ್ಷಿತವಾಗಿದೆ. ಈ ಘಟನೆಯಲ್ಲಿ ಶಾಮೀಲಾದವರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT