ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಆದ್ಯತೆಯಲ್ಲ, ಕೊನೆಯ ಆಯ್ಕೆ: ಪ್ರಧಾನಿಯಿಂದ ಶಾಂತಿಮಂತ್ರ

Last Updated 24 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಕಾರ್ಗಿಲ್: ‘ಭಾರತ ಎಂದಿಗೂ ಶಾಂತಿಯನ್ನು ಬಯಸುತ್ತದೆ. ಯುದ್ಧವು ದೇಶದ ಆದ್ಯತೆಯಲ್ಲ, ಅದು ಕೊನೆಯ ಆಯ್ಕೆ. ನಮ್ಮ ಸಶಸ್ತ್ರ ಪಡೆಗಳು ಬಲಿಷ್ಠವಾಗಿವೆ. ದೇಶದ ಮೇಲೆ ಕೆಂಗಣ್ಣು ಬೀರುವ ದುಷ್ಟ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

ಕಾರ್ಗಿಲ್‌ಗೆ ಸೋಮವಾರ ಭೇಟಿ ನೀಡಿದ ಪ್ರಧಾನಿ, ಯೋಧರ ಜೊತೆ ದೀಪಾವಳಿ ಆಚರಿಸಿ, ಮಾತನಾಡಿದರು. ಭಾರತವು ಯುದ್ಧವನ್ನು ವಿರೋಧಿಸುತ್ತದೆ. ಆದರೆ ಶಾಂತಿ ವಾತಾವರಣ ಇರಬೇಕಾದರೆ ಶಕ್ತಿ ಅಗತ್ಯ ಎಂದು ಅವರು ಒತ್ತಿ ಹೇಳಿದರು. ದೇಶದ ಶಕ್ತಿಯು ವೃದ್ಧಿಯಾಗುತ್ತಿದ್ದು, ಜಾಗತಿಕ ಶಾಂತಿ ಹಾಗೂ ಸಮೃದ್ಧಿಗೂ ನೆರವಾಗಲಿದೆ ಎಂದ ಅವರು,‘ಸಮತೋಲಿತ ಶಕ್ತಿ’ಯನ್ನು ಹೊಂದಿರುವ ಭಾರತದತ್ತ ಇಡೀ ಜಗತ್ತು ನೋಡುತ್ತಿದೆ ಎಂದು ಪ್ರತಿಪಾದಿಸಿದರು.

ರಾಮಾಯಣ ಹಾಗೂ ಮಹಾಭಾರತವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ, ಲಂಕಾ ಆಗಿರಲಿ ಅಥವಾ ಕುರುಕ್ಷೇತ್ರವಾಗಿರಲಿ, ಯುದ್ಧವನ್ನು ತಪ್ಪಿಸುವುದು ಭಾರತದ ಸಂಸ್ಕೃತಿ. ಜಾಗತಿಕ ಶಾಂತಿಯನ್ನು ಭಾರತ ಬಯಸುತ್ತದೆ ಎಂದು ಅವರು ಹೇಳಿದರು.

‘ಏಳೆಂಟು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆಯು ಐದನೇ ಸ್ಥಾನಕ್ಕೆ ಜಿಗಿದು, ಬೃಹತ್ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ದೇಶದಲ್ಲಿ 80 ಸಾವಿರ ನವೋದ್ಯಮಗಳು ಜನ್ಮತಳೆದಿವೆ. ಇಸ್ರೊ ದಾಖಲೆಯ 36 ಉಪಗ್ರಹಗಳನ್ನು ಏಕಕಾಲಕ್ಕೆ ಉಡ್ಡಯನ ಮಾಡಿದೆ. ಈ ಎಲ್ಲವೂ ಹೆಮ್ಮೆ ಮೂಡಿಸುತ್ತವೆ’ ಎಂದು ಮೋದಿ ಪ್ರತಿಪಾದಿಸಿದರು.

ದೇಶದಿಂದ ಭಯೋತ್ಪಾದನೆ, ನಕ್ಸಲ್‌ವಾದ ಹಾಗೂ ತೀವ್ರವಾದವನ್ನು ಹೊರಗಟ್ಟಲು ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದು, ಆಂತರಿಕ ಹಾಗೂ ಬಾಹ್ಯ ಶತ್ರುಗಳ ವಿರುದ್ಧ ದೇಶ ಹೋರಾಡುತ್ತಿದೆ ಎಂದರು.

‘ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಭಾರತವು ನಿರ್ಣಾಯಕ ಘಟ್ಟದಲ್ಲಿದೆ. ಭ್ರಷ್ಟ ವ್ಯಕ್ತಿಯು ಎಷ್ಟೇ ಪ್ರಭಾವಿಯಾಗಿದ್ದರೂ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಹೇಳಿದರು. ರಾಜಕೀಯ ನಾಯಕರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿ ಈ ಆರೋಪಗಳನ್ನು ಅಲ್ಲಗಳೆದಿದೆ.

ದೇಶದ ಅಭಿವೃದ್ಧಿ ಹಾಗೂ ಸಾಮರ್ಥ್ಯ ವೃದ್ಧಿಗೆ ಇದ್ದ ಅವಕಾಶಗಳನ್ನುತಡೆಹಿಡಿದಿದ್ದಹಿಂದಿನ ಸರ್ಕಾರಗಳನ್ನು ಟೀಕಿಸಿದ ಪ್ರಧಾನಿ, ದುರ್ಬಲ ಆಡಳಿತದ ನ್ಯೂನತೆಗಳನ್ನು ತಮ್ಮ ಸರ್ಕಾರ ಸರಿಪಡಿಸಿದ ಎಂದರು.

ಹುತಾತ್ಮರ ಸ್ಮರಣೆ

ಪ್ರತೀ ವರ್ಷದ ದೀಪಾವಳಿಯನ್ನು ಯೋಧರ ಜೊತೆ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಸಂಪ್ರದಾಯ ಮುಂದುವರಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ಜೊತೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ಯೋಧರು ಪರಾಕ್ರಮ ತೋರಿದ್ದರು. ಈ ಜಾಗದಲ್ಲಿ ಯೋಧರ ಜೊತೆ ಪ್ರಧಾನಿ ಅವರು ಈ ಬಾರಿಯ ಹಬ್ಬ ಆಚರಿಸಿದರು. ಯೋಧರ ಹೋರಾಟವನ್ನು ಸ್ಮರಿಸಿದ ಅವರು, ಯೋಧರ ಕುಟುಂಬ ತಮ್ಮ ಕುಟುಂಬ ಎಂದರು. ದೀಪಾವಳಿಯ ಸಿಹಿ ಹಾಗೂ ಬೆಳಕನ್ನು ಯೋಧರ ಮಧ್ಯದಲ್ಲೇ ಕಾಣುತ್ತೇನೆ ಎಂದರು.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಪ್ರತೀ ವರ್ಷದ ದೀಪಾವಳಿಯನ್ನು ವಿವಿಧ ಸೇನಾ ನೆಲೆಗಳಲ್ಲಿ ಪ್ರಧಾನಿ ಆಚರಿಸಿದ್ದಾರೆ. 2014ರಲ್ಲಿ ದೀಪಾವಳಿಯನ್ನು ಸಿಯಾಚಿನ್‌ನಲ್ಲಿ ಆಚರಿಸಿದ್ದರು. 2015ರಲ್ಲಿ ಪಂಜಾಬ್‌, 2016ರಲ್ಲಿ ಚೀನಾ ಗಡಿ ಸಮೀಪಕ್ಕೆ ಹೋಗಿದ್ದರು. ಅದರ ಮರುವರ್ಷ ಉತ್ತರ ಕಾಶ್ಮೀರದ ಗುರೆಜ್, 2018ರಲ್ಲಿ ಉತ್ತರಾಖಂಡದ ಹರ್ಸಿಲ್‌ನಲ್ಲಿ ಯೋಧರ ಜತೆ ದಿನ ಕಳೆದಿದ್ದರು. 2019ರಲ್ಲಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಾಗ ಅವರು ಜಮ್ಮು ಕಾಶ್ಮೀರದ ರಜೌರಿಗೆ ತೆರಳಿದ್ದರು. ನಂತರದ ವರ್ಷ ಲೊಂಗೇವಾಲಾದಲ್ಲಿದ್ದರು. ಕಳೆದ ವರ್ಷ ನೌಶೇರಾದಲ್ಲಿ ದೀಪಾವಳಿ ಸಡಗರದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT