ಮಂಗಳವಾರ, ಸೆಪ್ಟೆಂಬರ್ 29, 2020
25 °C

ಭಾರತೀಯ ಸಂಸ್ಕೃತಿ, ಮೌಲ್ಯ ರಕ್ಷಿಸಲು ಮೋದಿ ಸರ್ಕಾರ ಬದ್ಧವಾಗಿದೆ: ಅಮಿತ್‌ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬುಧವಾರ ಪ್ರಧಾನ ಮಂತ್ರಿ ಭೂಮಿ ಪೂಜೆ ನೆರವೇರಿಸಿದರು. ಈ ಧಾರ್ಮಿಕ ಕಾರ್ಯ ಪೂರ್ಣಗೊಳ್ಳುತ್ತಲೇ ಟ್ವೀಟ್‌ ಮಾಡಿರುವ ಗೃಹ ಸಚಿವ ಅಮಿತ್‌ ಶಾ, ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಮೋದಿ ಸರ್ಕಾರ ಬದ್ಧವಾಗಿದೆ,’ ಎಂದು ಹೇಳಿದ್ದಾರೆ.

ಕೋವಿಡ್‌ ಪೀಡಿತರಾಗಿರುವ ಅಮಿತ್‌ ಶಾ ಅವರು ಈ ಐತಿಹಾಸಿಕ ಸಮಾರಂಭದಿಂದ ದೂರು ಉಳಿಯಬೇಕಾಯಿತು. ಸದ್ಯ ಆಸ್ಪತ್ರೆಯಲ್ಲಿರುವ ಅವರು, ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇದು ಭಾರತದ ಐತಿಹಾಸಿಕ ಮತ್ತು ಹೆಮ್ಮೆಯ ದಿನ. ಶ್ರೀ ರಾಮನ ಜನ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಅವರು ಮಹಾನ್ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ,’ ಎಂದು ಶಾ ಟ್ವೀಟ್‌ ಮಾಡಿದ್ದಾರೆ.

‘ಭಗವಂತ ರಾಮನ ಭವ್ಯವಾದ ದೇವಾಲಯದ ನಿರ್ಮಾಣ ಕಾರ್ಯವು ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಮತ್ತು ನಿರ್ಣಾಯಕ ನಾಯಕತ್ವವನ್ನು ಪ್ರದರ್ಶಿಸುತ್ತದೆ. ಈ ಮರೆಯಲಾಗದ ದಿನದಂದು ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಮೋದಿ ಸರ್ಕಾರ ಬದ್ಧವಾಗಿದೆ,’ ಎಂದು ಅವರು ಹೇಳಿದ್ದಾರೆ.

‘ಅಯೋಧ್ಯೆಯಲ್ಲಿ ರಾಮನ ದೇವಾಲಯದ ನಿರ್ಮಾಣವು ಶತಮಾನಗಳಿಂದಲೂ ವಿಶ್ವದ ಹಲವು ದೇಶಗಳ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುವ ಮೂಲಕ ಕೋಟ್ಯಂತರ ಜನರ ನಂಬಿಕೆಗೆ ಗೌರವ ಸಲ್ಲಿಸಿದ್ದಾರೆ. ಇದಕ್ಕಾಗಿ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು