ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಪಡೆಗಳಿಗೆ ಡ್ರೋನ್‌ ಪ್ರತಿರೋಧಕ ವ್ಯವಸ್ಥೆ ಶೀಘ್ರ: ಅಮಿತ್ ಶಾ

ಜೈಸಲ್ಮೇರ್‌ನಲ್ಲಿ ನಡೆದ ಬಿಎಸ್‌ಎಫ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಹೇಳಿಕೆ
Last Updated 5 ಡಿಸೆಂಬರ್ 2021, 10:50 IST
ಅಕ್ಷರ ಗಾತ್ರ

ಜೈಸಲ್ಮೇರ್: ‘ಗಡಿಗಳ ಭದ್ರತೆಗೆ ಡ್ರೋನ್‌ಗಳ ಮೂಲಕ ಈಗ ಹೊಸದಾಗಿ ಅಪಾಯ ಎದುರಾಗುತ್ತಿದೆ. ಹಾಗಾಗಿ, ಗಡಿ ಭದ್ರತೆ ಹಾಗೂ ಯೋಧರ ರಕ್ಷಣೆಗಾಗಿ ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞಾನ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಇಲ್ಲಿನ ಶಹೀದ್ ಪೂನಮ್ ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡ್ರೋನ್‌ ಪ್ರತಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಸಲು ಬಿಎಸ್‌ಎಫ್‌, ಎನ್‌ಎಸ್‌ಜಿ ಹಾಗೂ ಡಿಆರ್‌ಡಿಒ ಜಂಟಿಯಾಗಿ ಕಾರ್ಯಪ್ರವೃತ್ತವಾಗಿವೆ. ಈ ತಂತ್ರಜ್ಞಾನ ಶೀಘ್ರವೇ ಭದ್ರತಾಪಡೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಹೇಳಿದರು.

ಭಾರತದ ಗಡಿ ಹಾಗೂ ಯೋಧರನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂಬುದನ್ನುಪುಲ್ವಾಮಾ, ಉರಿ ಘಟನೆಗಳ ನಂತರ ದೇಶ ನೀಡಿದ ಪ್ರತ್ಯುತ್ತರದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿಸಿಕೊಟ್ಟಿದೆ ಎಂದರು.

‘ಗಡಿ ಬಳಿ ಉತ್ತಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಗಡಿಗಳಲ್ಲಿ ರಸ್ತೆ ನಿರ್ಮಾಣಕ್ಕೆ 2008ರಿಂದ 2014ರ ಅವಧಿಯಲ್ಲಿ ಬಜೆಟ್‌ನಲ್ಲಿ ₹ 23,700 ಕೋಟಿ ಹಂಚಿಕೆ ಮಾಡಲಾಗಿತ್ತು. ಮೋದಿ ನೇತೃತ್ವದ ಸರ್ಕಾರ 2014–2020ರ ಅವಧಿಯಲ್ಲಿ ಅನುದಾನವನ್ನು ₹ 44,600 ಕೋಟಿಗೆ ಹೆಚ್ಚಿಸಿತು’ ಎಂದು ವಿವರಿಸಿದರು. ಬಿಎಸ್‌ಎಫ್‌ ನಿರ್ದೇಶಕ ಜನರಲ್ ಪಂಕಜಕುಮಾರ್ ಸಿಂಗ್ ಇದ್ದರು.

ಬಿಎಸ್‌ಎಫ್‌ಅನ್ನು 1965ರ ಡಿಸೆಂಬರ್‌ 1ರಂದು ಸ್ಥಾಪಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿ ಬದಲಾಗಿ, ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ರಾಜಸ್ಥಾನದ ಜೈಸಲ್ಮೇರ್‌ ನಗರದಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT